ಬೆಂಗಳೂರು:
ಕೆರೆ ‘ಅಭಿವೃದ್ಧಿ’ ಮತ್ತು ಇತರ ಚಟುವಟಿಕೆಗಳಿಗೆ ಹಣ ಸಂಗ್ರಹಣೆ ಮಾಡುವುದು ಅಕ್ರಮ ಎಂದು ಹೇಳಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ . ಹಣ ಸಂಗ್ರಹಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.ಕೆರೆ ಪುನರುಜ್ಜೀವನ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗಾಗಿ ಎನ್ಜಿಒಗಳು ಮತ್ತು ಸಂಘಗಳು ಹಣ ಸಂಗ್ರಹಿಸುತ್ತಿವೆ ಎಂದು ವರದಿಯಾಗಿವೆ. ಇದು ಕಾನೂನುಬದ್ಧವಲ್ಲ ಎಂದು ಪಾಲಿಕೆ ಹೇಳಿದೆ.
ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಹಲವು ಗುಂಪು ಇಂತಹ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಕೆರೆ ಅಭಿವೃದ್ಧಿಗಾಗಿ ಯುಪಿಐ ಪಾವತಿಗಳಿಗಾಗಿ ಕ್ಯೂಆರ್ ಕೋಡ್ ಗಳಲ್ಲಿ ಅಂಟಿಸಿದೆ ಎಂದು ಹಿರಿಯ ಎಂಜಿನಿಯರ್ ಒಬ್ಬರು ಹೇಳಿದ್ದಾರೆ.
ಖಾಸಗಿ ಸಂಘವು ಕೆರೆಗಳಿಗೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿ ಅಭಿವೃದ್ಧಿ ಕಾರ್ಯಕ್ಕಾಗಿ ತೆರಳುವ ಬಿಬಿಎಂಪಿ ನಿರ್ವಹಣಾ ತಂಡ ಮತ್ತು ಎಂಜಿನಿಯರ್ಗಳನ್ನು ತಡೆಯುವ ಕೆಲಸ ಮಾಡುತ್ತಿದ್ದರೆ. ನಗರದ ಕೆರೆಗಳು ಪಾಲಿಕೆಯ ಆಸ್ತಿಯಾಗಿದ್ದು, ಖಾಸದಿ ಸಂಸ್ಥೆಗಳ ನಿಧಿ ಸಂಗ್ರಹವನ್ನು ಒಪ್ಪಲು ಸಾಧ್ಯವಿಲ್ಲ. ಯಾವುದೇ ಖಾಸಗಿ ಸಂಸ್ಧೆ ಕೆರೆ ಅಭಿವೃದ್ಧಿ ಮಾಡಲು ಮುಂದಾದರೆ ಮೊದಲು ಅದು ಬಿಬಿಎಂಪಿಯೊಂದಿಗೆ ಒಪ್ಪಂದ ಪತ್ರವನ್ನು ಮಾಡಿಕೊಳ್ಳಬೇಕಾಗುತ್ತದೆ. ಒಪ್ಪಂದ ಮಾಡಿಕೊಳ್ಳುವವರು ನಿಧಿ ಸಂಗ್ರಹ, ವಾಣಿಜ್ಯ ಕಾರ್ಯಸೂಚಿಗಳನ್ನು ಆಶ್ರಯಿಸುವುದಿಲ್ಲ ಎಂದು ಘೋಷಿಸಬೇಕು ಎಂದು ಕೆರೆ ಅಭಿವೃದ್ಧಿ ಎಂಜಿನಿಯರ್ ಒಬ್ಬರು ಹೇಳಿದ್ದಾರೆ. ಕೆರೆ ಅಭಿವೃದ್ಧಿ ಹೆಸರಿನಲ್ಲಿ ನಿಧಿ ಸಂಗ್ರಹಿಸುತ್ತಿದ್ದ ಖಾಸಗಿ ಸಂಸ್ಥೆಯೊಂದಕ್ಕೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಟ್ಯಾಂಕ್ ಅಭಿವೃದ್ಧಿ ಮತ್ತು ಸಂರಕ್ಷಣಾ ಪ್ರಾಧಿಕಾರ (ಕೆಟಿಡಿಸಿಎ) ಕೂಡ ಬಿಬಿಎಂಪಿ ಕ್ರಮವನ್ನು ಬೆಂಬಲಿಸಿದೆ. ಕೆರೆ ಅಭಿವೃದ್ಧಿ ಹೆಸರಿನಲ್ಲಿ ನಿಧಿ ಸಂಗ್ರಹ ವಿಚಾರ ನಮ್ಮ ಗಮನಕ್ಕೆ ಬಂದರೆ ನಾವೂ ನೋಟಿಸ್ ನೀಡುತ್ತೇವೆಂದು ಹೇಳಿದೆ.ಸಾರ್ವಜನಿಕರಿಂದ ಜಲಮೂಲ ಅಭಿವೃದ್ಧಿಗಾಗಿ ಹಣ ಸಂಗ್ರಹಿಸುವ ವಿಷಯ ನ್ಯಾಯಾಲಯದಲ್ಲಿ ಬಗೆಹರಿಯುವವರೆಗೆ, ಈ ಸಂಗ್ರಹಗಳನ್ನು ಕಾನೂನುಬಾಹಿರವೆಂದೇ ಪರಿಗಣಿಸಲಾಗುತ್ತದೆ ಎಂದು ಕೆಟಿಡಿಸಿಎ ಸ್ಪಷ್ಟಪಡಿಸಿದೆ.
ಈಗಾಗಲೇ ನಮ್ಮ ತಂಡಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಸರೋವರ ನಿರ್ವಹಣೆಯಲ್ಲಿ ತೊಡಗಿರುವ ಎನ್ಜಿಒಗಳು ಮತ್ತು ಸಂಘಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಇವರು ನಿಧಿ ಸಂಗ್ರಹದಲ್ಲಿ ಭಾಗಿಯಾಗಿರುವುದು ಕಂಡುಬಂದರೆ, ಅವರಿಗೆ ನೀಡಲಾದ ಅನುಮತಿಯನ್ನು ರದ್ದುಗೊಳಿಸುತ್ತೇವೆ ಎಂದು ಕೆಟಿಡಿಸಿಎ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಲಿದ ಅರ್ಜಿ ವಿಚಾರಣೆ ನಡೆಸುವ ನ್ಯಾಯಾಧೀಶರು ಸುಪ್ರೀಂ ಕೋರ್ಟ್ಗೆ ವರ್ಗಾಯಿಸಲ್ಪಟ್ಟಿದ್ದಾರೆ. ಹೀಗಾಗಿ ಇದರ ತೀರ್ಪು ಬಾಕಿ ಉಳಿದಿದೆ. ಇದೀಗ ಹೊಸದಾಗಿ ವಿಚಾರಣೆ ನಡೆಯಬೇಕಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
