ಚಿಕ್ಕನಾಯಕನಹಳ್ಳಿ :
ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರ ಸರಕಾರಿ ನೌಕರರು ಆನ್ಲೈನ್ ಕ್ಯಾಂಪೇನ್ ಆರಂಭಿಸಿದ್ದಾರೆ. ಜಿಲ್ಲೆಯ ಸರಕಾರಿ ನೌಕರರು ತಮ್ಮ ವಾಟ್ಸ್ಯಾಪ್ ಸ್ಟೇಟಸ್ಗಳಲ್ಲಿ ಹಾಗು ಗ್ರೂಪ್ಗಳಲ್ಲಿ ಸತ್ಯಮೇವ ಜಯತೆ, ಕಾಯಕವೇ ಕೈಲಾಸ ಎಂದು ಜಿಲ್ಲಾಧಿಕಾರಿಗಳ ಪರ ಅಭಿಯಾನ ಆರಂಭಿಸಿದ್ದಾರೆ.
ಜಿಲ್ಲೆಯಲ್ಲಿ ನಡೆದಿರುವ ಭೂಹಗರಣಕ್ಕೆ ಸಂಬಂಧಿಸಿ ʼತುಮಕೂರು ಜಿಲ್ಲೆಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡಲು ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಶಾಲು, ಪೇಟ, ರೇಷ್ಮೆ ಸೀರೆ ನೀಡಿ ನಾಗರಿಕ ಸನ್ಮಾನ ಕಾರ್ಯಕ್ರಮ’ವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಇಂದು (ಜು.11) ಹಮ್ಮಿಕೊಂಡಿತ್ತು. ಈ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳ ಪರವಾಗಿ ಸರಕಾರಿ ನೌಕರರು ಅಭಿಯಾನ ಆರಂಭಿಸಿದ್ದಾರೆ. ʼನಾಗರಿಕ ಸನ್ಮಾನʼವನ್ನು ತಡೆಯಲು ಮುಂದಾಗಿದ್ದಾರೆ.
ಡಿಸಿ ಅವರು ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕರಾಗಿದ್ದು ಅವರಿಗೆ ನೈತಿಕ ಬೆಂಬಲ ನೀಡಲು ಕರ್ನಾಟಕ ರಾಜ್ಯ ಸರಕಾರಿ ನೌಕರರ ಜಿಲ್ಲಾ ಸಂಘ, ಕಂದಾಯ ಇಲಾಖೆ, ಗ್ರಾಮ ಆಡಳಿತಾಧಿಕಾರಿಗಳ ನೌಕರರ ಸಂಘ, ಶಿರಸ್ತೇದಾರ್ ಮತ್ತು ಉಪತಹಸೀಲ್ದಾರ್ ನೌಕರರ ಸಂಘಗಳು ನಮ್ಮ ಜಿಲ್ಲಾಧಿಕಾರಿಗಳು, ನಮ್ಮ ಹೆಮ್ಮೆ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಅಭಿಯಾನವನ್ನು ಆರಂಭ ಮಾಡಿದ್ದಾರೆ.
ಡಿಸಿ ಶುಭಕಲ್ಯಾಣ್ ಅವರು ಇತ್ತೀಚೆಗೆ ಭೂ ಹಗರಣ ಮತ್ತು ಡಿಜಿಟಲ್ ಸಹಿ ದುರುಪಯೋಗಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಟೀಕೆ ಮತ್ತು ವಿವಾದಕ್ಕೆ ಗುರಿಯಾಗಿದ್ದಾರೆ. ಮಧುಗಿರಿ ತಾಲ್ಲೂಕಿನಲ್ಲಿ 43 ಎಕರೆ 11 ಗುಂಟೆ ಜಮೀನನ್ನು ಅನಧಿಕೃತವಾಗಿ ಭೂ ಪರಿವರ್ತನೆ ಮಾಡಿಕೊಡಲು ಜಿಲ್ಲಾಧಿಕಾರಿಯವರ ಡಿಜಿಟಲ್ ಸಹಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಕೆಲವು ಸರಕಾರಿ ಜಮೀನುಗಳನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿದ್ದಾರೆ ಎಂಬ ಆರೋಪವೂ ಇದೆ. ಇದರಲ್ಲಿ ಜಿಲ್ಲಾಧಿಕಾರಿ ಮತ್ತು ಇತರೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು, ನೌಕರರು ಮತ್ತು ಅಕ್ರಮವಾಗಿ ಭೂ ಪರಿವರ್ತನೆ ಮಾಡಿಕೊಟ್ಟಿರುವ ಜಿಲ್ಲಾಧಿಕಾರಿ ವಿರುದ್ದ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಹಾಗು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು. ಈ ವಿವಾದದ ಕುರಿತು ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದ್ದು ಜಿಲ್ಲಾಧಿಕಾರಿಗಳ ಕ್ರಮಗಳ ಬಗ್ಗೆ ಪ್ರಶ್ನೆಗಳು ಎತ್ತಲ್ಪಡುತ್ತಿವೆ.
ʼತುಮಕೂರು ಜಿಲ್ಲೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಶಾಲು, ಪೇಟ, ರೇಷ್ಮೆ ಸೀರೆ ನೀಡಿ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಜು.11 ರಂದು ಹಮ್ಮಿಕೊಂಡಿದೆʼ ಎಂದು ಪಕ್ಷ ತಿಳಿಸಿತ್ತು.