ಅಹ್ಮದ್‌ನಗರ:
ಮನೆ ಕಲಹದ ನಡುವೆ ಮಹಿಳೆಯೊಬ್ಬರು ತ್ರಿಶೂಲವನ್ನು ಬೀಸಿ ಎಸೆದಿದ್ದು, ಇದು 11 ತಿಂಗಳ ಮಗುವಿನ ತಲೆಗೆ ತಾಗಿ ಮಗು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಗುರುವಾರ ನಡೆದಿದೆ. ಅವಧೂತ್ ಮೆಂಗ್ವಾಡೆ ಮೃತಪಟ್ಟ ಮಗು. ಪ್ರಕರಣಕ್ಕೆ ಸಂಬಂಧಿಸಿ ಪಲ್ಲವಿ ಮತ್ತು ಸಚಿನ್ ಮೆಂಗ್ವಾಡೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸ್ಥಳದಲ್ಲಿದ್ದ ಮಗುವಿನ ತಂದೆಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿರುವುದಾಗಿ ಹಿರಿಯ ಇನ್ಸ್‌ಪೆಕ್ಟರ್ ನಾರಾಯಣ್ ದೇಶಮುಖ್ ತಿಳಿಸಿದ್ದಾರೆ.
ಪುಣೆಯಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿರುವ ಕೇದ್‌ಗಾಂವ್‌ನಲ್ಲಿರುವ ಅಂಬೆಗಾಂವ್ ಪುನರ್ವಸತಿ ಕಾಲೋನಿಯ ಮನೆಯೊಂದರಲ್ಲಿ ನಡೆದ ಜಗಳದಲ್ಲಿ ಮಗುವೊಂದು ಸಾವನ್ನಪ್ಪಿದೆ. ಮನೆ ಮಂದಿ ಜಗಳವಾಡುತ್ತಿದ್ದಾಗ ಎಸೆದ ತ್ರಿಶೂಲವು ಮಗುವಿನ ತಲೆಗೆ ಬಡಿದಿದ್ದು ಇದರಿಂದ 11 ತಿಂಗಳ ಮಗು ಮೃತಪಟ್ಟಿದೆ.
ಮನೆಯಲ್ಲಿದ್ದ ಪಲ್ಲವಿ ಮೆಂಗ್ವಾಡೆ ಮತ್ತು ಆಕೆಯ ಪತಿ ಸಚಿನ್ ಮೆಂಗ್ವಾಡೆ ಹಾಗೂ ಪಲ್ಲವಿಯ ಸೋದರ ಮಾವ ನಿತಿನ್ ಮೆಂಗ್ವಾಡೆ ಮತ್ತು ಆತನ ಪತ್ನಿ ಭಾಗ್ಯಶ್ರೀ ಯಾವುದೋ ಕಾರಣಕ್ಕೆ ತೀವ್ರ ವಾಗ್ವಾದ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪಲ್ಲವಿ ಎಸೆದ ತ್ರಿಶೂಲ ಭಾಗ್ಯಶ್ರೀ ಎತ್ತಿ ಹಿಡಿದುಕೊಂಡಿದ್ದ ಮಗುವಿಗೆ ತಾಗಿದೆ.
ತೀವ್ರ ವಾಗ್ವಾದದ ಸಂದರ್ಭದಲ್ಲಿ ಪಲ್ಲವಿ ತ್ರಿಶೂಲವನ್ನು ಎತ್ತಿ ತನ್ನ ಸೋದರ ಮಾವ ನಿತಿನ್ ಮೆಂಗ್ವಾಡೆ ಮೇಲೆ ದಾಳಿ ನಡೆಸಲು ಮುಂದಾಗಿದ್ದಾಳೆ. ಆಗ ನಿತಿನ್ ಮೆಂಗ್ವಾಡೆ ಮಗುವನ್ನು ಹಿಡಿದುಕೊಂಡು ನಿಂತಿದ್ದ ತನ್ನ ಪತ್ನಿ ಭಾಗ್ಯಶ್ರೀ ಜೊತೆ ಜಗಳವನ್ನು ಶಮನಗೊಳಿಸಲು ಪ್ರಯತ್ನಿಸುತ್ತಿದ್ದ. ಆಗ ಪಲ್ಲವಿ ಎಸೆದ ತ್ರಿಶೂಲ ಭಾಗ್ಯಶ್ರೀ ಕೈಯಲ್ಲಿದ್ದ ಮಗು ಅವಧೂತ್ ಗೆ ತಾಗಿದೆ. ನಿತಿನ್ ತಪ್ಪಿಸಿಕೊಂಡಿದ್ದರಿಂದ ಈ ಘಟನೆ ನಡೆದಿದೆ.
ತ್ರಿಶೂಲವು ಮಗುವಿನ ತಲೆಗೆ ಬಡಿದು ತಲೆಗೆ ಮಾರಕ ಗಾಯವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದೆ. ಕೂಡಲೇ ಮನೆ ಮಂದಿ ಮಗುವನ್ನು ಎತ್ತಿಕೊಂಡು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಲ್ಲಿ ವೈದ್ಯರು ಮಗು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಹಿರಿಯ ಇನ್ಸ್‌ಪೆಕ್ಟರ್ ನಾರಾಯಣ್ ದೇಶಮುಖ್, ಮನೆ ಕಲಹದ ನಡುವೆ ಮಗುವೊಂದು ದುರಂತವಾಗಿ ಸಾವನ್ನಪ್ಪಿದೆ. ಪಲ್ಲವಿ ಮತ್ತು ಸಚಿನ್ ಮೆಂಗ್ವಾಡೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸ್ಥಳದಲ್ಲಿದ್ದ ಮೂವರು ವಯಸ್ಕರಾದ ಪಲ್ಲವಿ, ಸಚಿನ್ ಮತ್ತು ನಿತಿನ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಸಾಕ್ಷ್ಯಗಳನ್ನು ಅಳಿಸಿಹಾಕುವ ಪ್ರಯತ್ನ ನಡೆಸಿದ್ದಾರೆ. ತ್ರಿಶೂಲವನ್ನು ಸ್ವಚ್ಛಗೊಳಿಸಲಾಗಿದೆ ಮತ್ತು ಕೋಣೆಯಲ್ಲಿನ ರಕ್ತದ ಕಲೆಗಳನ್ನು ಒರೆಸಲಾಗಿದೆ. ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿವೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
