ಹಾಡಹಗಲೇ ಸಿನಿಮೀಯ ರೀತಿ ದರೋಡೆ

ಕಲಬುರಗಿ: 

   ಬೀದರನಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಹತ್ಯೆ ಮಾಡಿ ದರೋಡೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಕಲಬುರಿಗಿಯಲ್ಲೊಂದು ಭಯಾನಕ ದರೋಡೆ ನಡೆದಿದ್ದು ನಗರ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ.

   ನಗರದ ಸರಾಫ್ ಬಜಾರ್‌ನಲ್ಲಿನ ಚಿನ್ನದ ಅಂಗಡಿಗೆ ನುಗ್ಗಿದ ನಾಲ್ವರು ಮುಸುಕು ದರೋಡೆಕೋರರು ಚಿನ್ನದ ಅಂಗಡಿಯ ಮಾಲೀಕನಿಗೆ ಗನ್ ತೋರಿಸಿ, ಕೈ ಕಾಲು ಕಟ್ಟಿ ಹಾಕಿ ಅಂಗಡಿಯಲ್ಲಿಟ್ಟಿದ್ದ ಲಕ್ಷಾಂತರ ಮೌಲ್ಯದ 2 ರಿಂದ 3 ಕೆಜಿ ಚಿನ್ನಾಭರಣವನ್ನು ಲೂಟಿ ಮಾಡಿದ ಸಿನಿಮೀಯ ರೀತಿಯ ಘಟನೆ ಹಾಡಹಗಲೇ ನಡೆದಿದೆ.

    ಶುಕ್ರವಾರ ಮಧ್ಯಾಹ್ಮ 12ಗಂಟೆಗೆ ಚಿನ್ನದ ಅಂಗಡಿಯಲ್ಲಿ ಮಾಲೀಕರು ಕುಳಿತುಕೊಂಡಿದ್ದಾಗ ಅಲ್ಲಿಗೆ ಬಂದ ನಾಲ್ವರು ಮುಸುಕು ಹಾಗೂ ಕ್ಯಾಪ್ ಧರಿಸಿದ ದರೋಡೆಕೋರರು ಸಲೀಸಾಗಿ ಅಂಗಡಿಗೆ ನುಗ್ಗಿದ್ದು ಅಲ್ಲಿ ಮಾಲೀಕನಿಗೆ ಗನ್‌ನಿಂದ ಹೆದರಿಸಿ, ಕೈ ಕಾಲು ಕಟ್ಟಿ ದರೋಡೆ ಮಾಡಿ ಹೋಗಿದ್ದಾರೆ.

   ಜನನಿಬಿಡ ಪ್ರದೇಶವಾಗಿರುವ ಮಾರ್ಕೆಟ್‌ನಲ್ಲಿ ಈ ದರೋಡೆ ನಡೆದಿದೆ. ದರೋಡೆಕೋರರ ಕೃತ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸುದ್ದಿ ತಿಳಿದು ಕಮೀಷನರ್ ಡಾ. ಶರಣಪ್ಪ, ಡಿಸಿಪಿ ಕನೀಕಾ ಸಿಕ್ರಿವಾಲ್, ಎಸಿಪಿ, ಪಿಐ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

   ಜನವರಿ 16ರಂದು ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಲು ಬಂದ ಸಿಬ್ಬಂದಿ ಮೇಲೆ ಹಾಡಹಗಲೇ ಗುಂಡು ಹಾರಿಸಿ ಹಣದ ಬಾಕ್ಸ್‌ನೊಂದಿಗೆ ಇಬ್ಬರು ಕಳ್ಳರು ಪರಾರಿಯಾಗಿದ್ದ ಘಟನೆ ನಡೆದಿತ್ತು. ಆಗ ಗುಂಡಿನ ದಾಳಿಯಲ್ಲಿ ಓರ್ವ ಬ್ಯಾಂಕ್ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಆಸ್ಪತ್ರೆಗೆ ದಾಖಲಾಗಿದ್ದ. ಈ ಘಟನೆ ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿತ್ತು. ಇದರ ಬೆನ್ನಲ್ಲೇ ಇದೀಗ ಕಲಬುರಗಿ ಈ ಘಟನೆ ನಡೆದಿದ್ದು ಜನರನ್ನು ಇನ್ನಷ್ಟು ಭಯಭೀತರನ್ನಾಗಿಸಿದೆ.

Recent Articles

spot_img

Related Stories

Share via
Copy link