ನವದೆಹಲಿ:
ಜುಲೈ 16 ರಂದು ಯೆಮೆನ್ನಲ್ಲಿ ಗಲ್ಲಿಗೇರಿಸಲು ನಿಗದಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಬಿಡುಗಡೆಗೊಳಿಸಲು ಅಥವಾ ಮರಣದಂಡನೆಯನ್ನು ತಡೆಯಲು ಕೇಂದ್ರ ಸರ್ಕಾರವು ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ ಎಂದು ಸೋಮವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಸರ್ಕಾರದ ಹಸ್ತಕ್ಷೇಪಕ್ಕೆ ಕೋರಿ ಸಲ್ಲಿಸಲಾದ ಕೊನೆಯ ಕ್ಷಣದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವು ಸಾಧ್ಯವಿರುವಷ್ಟು ಪ್ರಯತ್ನವನ್ನು ಮಾಡಿದೆ. ಇನ್ನೂ ಹೆಚ್ಚಿನದನ್ನು ಮಾಡಲು ಸದ್ಯ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ವಿಷಯದಲ್ಲಿ ಸರ್ಕಾರ ಹೆಚ್ಚಿನದು ಏನೂ ಮಾಡಲು ಸಾಧ್ಯವಿಲ್ಲ. ಮೃತ ವ್ಯಕ್ತಿಯ ಕುಟುಂಬಕ್ಕೆ ಹಣ ಕೊಡುವ ಮಾತುಕತೆ ಖಾಸಗಿ ವಿಷಯವಾಗಿದೆ. ಈ ವಿಷಯದಲ್ಲಿ ಭಾರತವು ಹೋಗಬಹುದಾದ ಒಂದು ಹಂತವಿದೆ ಮತ್ತು ಸರ್ಕಾರ ಈಗಾಗಲೇ ಆ ಮಿತಿಯನ್ನು ತಲುಪಿದೆ ಎಂದು ಅವರು ಹೇಳಿದರು.
ನಿಮಿಷಾ ಪ್ರಿಯಾ 2017 ರಲ್ಲಿ ತನ್ನ ಯೆಮೆನ್ ವ್ಯವಹಾರ ಪಾಲುದಾರ ತಲಾಲ್ ಅಬ್ದೋ ಮಹ್ದಿ ಅವರ ಕೊಲೆ ಆರೋಪದ ಮೇಲೆ ಮರಣದಂಡನೆಯನ್ನು ಎದುರಿಸುತ್ತಿದ್ದಾರೆ . ನಿಮಿಷಾ ಪ್ರಿಯಾಳನ್ನು ಮರಣದಂಡನೆಯಿಂದ ರಕ್ಷಿಸಲು ಕೊಲೆಯಾದ ವ್ಯಕ್ತಿಯ ಕುಟುಂಬಕ್ಕೆ ಹಣವನ್ನು ಪಾವತಿಸುವ ಮೂಲಕ ಮರಣದಂಡನೆಯನ್ನು ಮಾತುಕತೆ ಮೂಲಕ ಪರಿಹರಿಸಬಹುದು ಎಂದು ಹೇಳಲಾಗಿದೆ. ನ್ಯಾಯಮೂರ್ತಿ ಧುಲಿಯಾ ನೇತೃತ್ವದ ಪೀಠವು ಅರ್ಜಿಯ ಪ್ರತಿಯನ್ನು ಕೇಂದ್ರದ ಅತ್ಯುನ್ನತ ಕಾನೂನು ಅಧಿಕಾರಿಯಾದ ಭಾರತದ ಅಟಾರ್ನಿ ಜನರಲ್ ಅವರಿಗೆ ಸಲ್ಲಿಸುವಂತೆ ನಿರ್ದೇಶಿಸಿತು.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್ನ ನರ್ಸ್ ಆಗಿರುವ ನಿಮಿಷಾ ಪ್ರಿಯಾ, ದಿನಗೂಲಿ ಕಾರ್ಮಿಕರಾಗಿರುವ ತನ್ನ ಪೋಷಕರನ್ನು ಪೋಷಿಸಲು 2008 ರಲ್ಲಿ ಯೆಮನ್ಗೆ ತೆರಳಿದ್ದರು. ಅವರು ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದರು ಮತ್ತು ಅಂತಿಮವಾಗಿ ತಮ್ಮದೇ ಆದ ಕ್ಲಿನಿಕ್ ತೆರೆಯಲು ನಿರ್ಧರಿಸಿದರು.2017 ರಲ್ಲಿ, ಅವರ ಮತ್ತು ಅವರ ಯೆಮೆನ್ ವ್ಯವಹಾರ ಪಾಲುದಾರ ತಲಾಲ್ ಅಬ್ದೋ ಮಹ್ದಿ ನಡುವೆ ವಿವಾದ ಉಂಟಾಯಿತು, ಅವರು ಹಣವನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನಗಳನ್ನು ವಿರೋಧಿಸಿದರು ಎಂದು ವರದಿಯಾಗಿದೆ.








