ಕಲಬುರಗಿ:
ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರನ್ನು ಸೋಮವಾರ ಬಂಧಿಸಿದ್ದಾರೆ. ಬಂಧನದ ಬೆನ್ನಲ್ಲೇ ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
“ಗುಲ್ಬರ್ಗ ದಕ್ಷಿಣ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರು ಮಾದಕ ದ್ರವ್ಯ ಮಾರಾಟದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಬಂದ ನಂತರ ತಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅವರನ್ನು ಉಚ್ಚಾಟಿಸಲಾಗಿದೆ” ಎಂದು ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂಬಂಧ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಪಕ್ಷ ಬಿಜೆಪಿ, ಕಣ್ಣಿ ಅವರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತರು ಎಂದು ಹೇಳಿದೆ. “ಮಾದಕ ದ್ರವ್ಯ ಚಟುವಟಿಕೆಗಳಲ್ಲಿ ಸಚಿವರೊಬ್ಬರ ಆಪ್ತರು ಮತ್ತು ಜಿಲ್ಲಾ ಮಟ್ಟದ ಕಾಂಗ್ರೆಸ್ ನಾಯಕನ ಬಂಧನವು ಕಾಂಗ್ರೆಸ್ ಪಕ್ಷದ ನೈತಿಕ ಪತನಕ್ಕೆ ಸಾಕ್ಷಿಯಾಗಿದೆ” ಎಂದು ಬಿಜೆಪಿ “X” ನಲ್ಲಿ ಪ್ರಿಯಾಂಕ್ ಖರ್ಗೆ ಮತ್ತು ಕಣ್ಣಿ ಅವರ ಚಿತ್ರಗಳನ್ನು ಪೋಸ್ಟ್ ಮಾಡಿದೆ.
ಡ್ರಗ್ಸ್ ವ್ಯಾಪಾರಿಗಳನ್ನು ನಿಮ್ಮ ಆಪ್ತ ವಲಯದಲ್ಲಿ ಇಟ್ಟುಕೊಳ್ಳಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್, ಕಣ್ಣಿ ವಿರುದ್ಧ ಕ್ರಮ ಕೈಗೊಂಡಿದೆ ಮತ್ತು “ಅವರನ್ನು ಪಕ್ಷದಿಂದ ಹೊರಹಾಕಿದೆ” ಎಂದು ಹೇಳಿದ್ದಾರೆ.
“ಬಿಜೆಪಿಗೆ ಬೇರೆ ಕೆಲಸವಿಲ್ಲ, ವಿವಿಧ ಆರೋಪಗಳನ್ನು ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ಮತ್ತು ಬಿಜೆಪಿ ನಾಯಕ ಯಡಿಯೂರಪ್ಪ ವಿರುದ್ಧ ಅವರ ಪಕ್ಷ ಏನು ಕ್ರಮ ಕೈಗೊಂಡಿದೆ ಎಂದು ಖರ್ಗೆ ಪ್ರಶ್ನಿಸಿದರು.”ನಿಮ್ಮಲ್ಲಿ(ಬಿಜೆಪಿ) ದಲಿತರನ್ನು ನಿಂದಿಸುವವರು, ಮಹಿಳೆಯರ ಮೇಲೆ ಅತ್ಯಾಚಾರ ಮಾಡುವವರು ಮತ್ತು ಪೋಕ್ಸೊ ಆರೋಪಿಗಳು ಇದ್ದಾರೆ ಮತ್ತು ನೀವು ಮೊದಲು ಅದರ ಬಗ್ಗೆ ಮಾತನಾಡಿ… ಕನಿಷ್ಠ ಪಕ್ಷ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ, ಅವರಿಗೆ ಧೈರ್ಯವಿದ್ದರೆ ಮುನಿರತ್ನ ಮತ್ತು ಯಡಿಯೂರಪ್ಪ ವಿರುದ್ಧ ಕ್ರಮ ತೆಗೆದುಕೊಂಡು ನಂತರ ನನ್ನ ಬಗ್ಗೆ ಮಾತನಾಡಲಿ” ಎಂದು ಸವಾಲು ಹಾಕಿದರು.
