ಬಿಜಾಪುರ:
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ‘ಶಿಕ್ಷಾ ದೂತ’ ಅಥವಾ ತಾತ್ಕಾಲಿಕ ಭೇಟಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸ್ ಮಾಹಿತಿದಾರರು ಎಂಬ ಅನುಮಾನದ ಮೇಲೆ ನಕ್ಸಲರು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಮಧ್ಯರಾತ್ರಿ ಫರ್ಸೆಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡೂ ಕೊಲೆಗಳು ನಡೆದಿದ್ದು, ಭದ್ರತಾ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತರಲ್ಲಿ ಒಬ್ಬರು ಫರ್ಸೆಗಢ ಪ್ರದೇಶದ ಪಿಲ್ಲೂರು ಗ್ರಾಮದ ನಿವಾಸಿ ವಿನೋದ್ ಮಡೆ(28) ಕೊಡಪಡ್ಗು ಗ್ರಾಮದ ಶಾಲೆಯ ಶಿಕ್ಷಕರಾಗಿದ್ದರು. ಮತ್ತೊಬ್ಬರು ಟೆಕಮೇಟ ಗ್ರಾಮದಲ್ಲಿ ವಾಸಿಸುತ್ತಿದ್ದ ಸುರೇಶ್ ಮೆಟ್ಟಾ(29) ಅವರನ್ನು ಸ್ಥಳೀಯ ಶಾಲೆಯಲ್ಲಿ ನಿಯೋಜಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.ಘಟನೆ ನಡೆದ ಸ್ಥಳ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಒಳಭಾಗದಲ್ಲಿ ಇರುವುದರಿಂದ. ಇಬ್ಬರ ಶವಗಳನ್ನು ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿಲ್ಲ ಮತ್ತು ಪ್ರಸ್ತುತ ಶವ ವಶಪಡಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ಮಾಹಿತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಈ ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.ಈ ಘಟನೆಯೊಂದಿಗೆ, ಈ ವರ್ಷ ಇಲ್ಲಿಯವರೆಗೆ ಬಿಜಾಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತರ್ ಪ್ರದೇಶದಲ್ಲಿ ಮಾವೋವಾದಿಗಳಿಂದ ಸುಮಾರು 25 ಜನ ಪ್ರಾಣ ಕಳೆದುಕೊಂಡಿದ್ದಾರೆ.
