ದಾವಣಗೆರೆ : ಪತಿಯನ್ನು ಕೊಂದು ದೇವರ ಕೋಣೆಯಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ….!

ದಾವಣಗೆರೆ: 

  ಪತಿಯನ್ನು ಕೊಂದು ದೇವರ ಮನೆಯಲ್ಲಿ ಹೂತು ಹಾಕಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಸಹಿತ 50 ಸಾವಿರ ದಂಡ ವಿಧಿಸಿದೆ. ಪತಿ ಲಕ್ಷ್ಮಣ ಅವರನ್ನು ಕೊಲೆ   ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪತ್ನಿ ಗಂಗಮ್ಮ (54) ಹಾಗೂ ಆಕೆಯ ಪ್ರಿಯಕರ ಜಗದೀಶ್ (64) ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

   2015ರ ಸೆಪ್ಟೆಂಬರ್ 8ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನೆಲಹೊನ್ನೆ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.‌ ಈ ಸಂಬಂಧ ಲಕ್ಷ್ಮಣ ಅವರ ಪುತ್ರಿ ಉಷಾ ಹೊನ್ನಾಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

  ಗ್ರಾಮದ ನಿವಾಸಿ ಜಗದೀಶ್​ನೊಂದಿಗೆ ಗಂಗಮ್ಮ ವಿವಾಹೇತರ ಸಂಬಂಧ ಹೊಂದಿದ್ದು, ಇದಕ್ಕೆ ಪತಿ ಅಡ್ಡಿಯಾಗುತ್ತಾನೆಂದು, ಇಬ್ಬರೂ ಸೇರಿ ಮನೆಯಲ್ಲೇ ಲಕ್ಷ್ಮಣನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಬಳಿಕ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಲ್ಲುತ್ತೇವೆ ಎಂದು ಮಗಳು ಉಷಾಗೆ ಬೆದರಿಕೆ ಹಾಕಿದ್ದರು.

  ಗಂಗಮ್ಮ ಹಾಗೂ ಪ್ರಿಯಕರ ಜಗದೀಶ್ ಇಬ್ಬರೂ ಸೇರಿ ಲಕ್ಷ್ಮಣನ ಮೃತದೇಹವನ್ನು ಮನೆಯ ದೇವರ ಕೋಣೆಯಲ್ಲಿಯೇ ಗುಂಡಿ ತೋಡಿ ಹೂತು ಹಾಕಿದ್ದರು.

  ಎ1 ಆರೋಪಿ ಜಗದೀಶ್​ (64) ಹಾಗೂ ಎ2 ಆರೋಪಿ ಗಂಗಮ್ಮ (54) ವಿರುದ್ಧ ಹೊನ್ನಾಳಿ ಪೊಲೀಸ್​ ಠಾಣೆಯ ಅಂದಿನ ತನಿಖಾಧಿಕಾರಿ ಗಜೇಂದ್ರಪ್ಪ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯನವರ್ ಅವರು ಆರೋಪ ಸಾಬೀತಾಗಿದ್ದರಿಂದ ಸಿಆರ್‌ಪಿಸಿಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 55 ಸಾವಿರ ರೂ. ದಂಡ‌ ವಿಧಿಸಿ ತೀರ್ಪು ನೀಡಿದ್ದಾರೆ. ಮೃತನ ಕುಟುಂಬದ ಪರ ಸರ್ಕಾರಿ ವಕೀಲರಾದ ಸತೀಶ್​ ವಾದ ಮಂಡಿಸಿದ್ದರು.

Recent Articles

spot_img

Related Stories

Share via
Copy link