ರಾಂಚಿ:
ಕಳ್ಳನೊಬ್ಬ ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ಮಾಡಿ ನಂತರ ಹೊರಗೆ ಬರುವ ಮುನ್ನ ಮದ್ಯದ ಅಮಲಿನಲ್ಲಿ ಅಲ್ಲೇ ನಿದ್ದೆಗೆ ಜಾರಿದ್ದಾನೆ. ಇದರಿಂದಾಗಿ ಆತ ದೇವಸ್ಥಾನದಲ್ಲಿ ಸ್ಥಳೀಯರು ಮತ್ತು ಅರ್ಚಕರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ನಂತರ ಅವನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಪೊಲೀಸರು ಕಳ್ಳನನ್ನು, ದೇವಸ್ಥಾನದಿಂದ ಕದ್ದ ವಸ್ತುಗಳ ಜೊತೆಗೆ ವಶಕ್ಕೆ ಪಡೆದಿದ್ದಾರೆ. ಕಳ್ಳ ದೇವಸ್ಥಾನದಲ್ಲಿ ಕದ್ದ ವಸ್ತುಗಳನ್ನು ಹಿಡಿದುಕೊಂಡು ಮಲಗಿರುವ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
ವಿಚಾರಣೆಯ ವೇಳೆ ತನ್ನ ಸ್ನೇಹಿತರೊಂದಿಗೆ ಹೆಚ್ಚು ಮದ್ಯ ಸೇವಿಸಿದ್ದಾಗಿ ಆರೋಪಿ ವೀರ್ ನಾಯಕ್ ಪೊಲೀಸರಿಗೆ ತಿಳಿಸಿದ್ದಾನೆ. ನಂತರ ಕಾಳಿ ದೇವಸ್ಥಾನದ ಮುಂಭಾಗದ ಗೋಡೆಯನ್ನು ಹತ್ತಿ ಬಾಗಿಲಿನ ಬೀಗ ಮುರಿದು ದೇವಸ್ಥಾನದೊಳಗೆ ಪ್ರವೇಶಿಸಿದ್ದಾನೆ. ಅಲಂಕಾರ ಸಾಮಗ್ರಿಗಳು, ಗಂಟೆ, ಪೂಜಾ ಥಾಲಿ ಮತ್ತು ಆಭರಣಗಳನ್ನು ಕದ್ದು ತನ್ನ ಚೀಲಗಳಲ್ಲಿ ತುಂಬಿಕೊಂಡು ದೇವಾಲಯದಿಂದ ಓಡಿಹೋಗಲು ಅವನು ಸಿದ್ಧನಾಗಿದ್ದನು. ಆದರೆ ಆ ವೇಳೆ ಅವನು ಕುಡಿದ ಮತ್ತಿನಲ್ಲಿ ಅಲ್ಲಿಯೇ ನಿದ್ರೆಗೆ ಜಾರಿದ್ದಾನೆ.
ಬೆಳಿಗ್ಗೆ ಸ್ಥಳೀಯರು ದೇವಾಲಯದೊಳಗೆ ಒಬ್ಬ ವ್ಯಕ್ತಿ ನಿದ್ರೆ ಮಾಡುವುದನ್ನು ನೋಡಿದ್ದಾರೆ. ಅನುಮಾನಗೊಂಡು ಅವರು ಅವನ ಚೀಲವನ್ನು ತೆರೆದಾಗ, ಅದು ದೇವಾಲಯದಲ್ಲಿ ಇರಿಸಲಾಗಿದ್ದ ವಸ್ತುಗಳಿಂದ ತುಂಬಿರುವುದನ್ನು ಕಂಡು ಶಾಕ್ ಆಗಿದ್ದಾರೆ. ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಹಾಗೂ ಕದ್ದವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ವಿಚಾರಣೆಯ ಸಮಯದಲ್ಲಿ, ಆರೋಪಿ ಕಳ್ಳತನಕ್ಕೆ ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಅವನು ಯಾವಾಗ ನಿದ್ರೆ ಮಾಡಿದ್ದಾನೆಂದು ತನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾನೆ. ಹಾಗಾಗಿ ಇದು ದೇವರ ಪವಾಡ ಎಂದೇ ಸ್ಥಳೀಯರು ಹೇಳಿದ್ದಾರೆ.
