ಮಹಿಳೆಯರ ಏಕದಿನ: ಭಾರತ ತಂಡದ ಶುಭಾರಂಭ

ಸೌತಾಂಪ್ಟನ್‌: 

    ದೀಪ್ತಿ ಶರ್ಮಾ ಮತ್ತು ಜೆಮಿಮಾ ರಾಡ್ರಿಗಸ್ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ  ತಂಡ 4 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಕೌರ್‌ ಪಡೆ 1-0 ಮುನ್ನಡೆ ಕಾಯ್ದುಕೊಂಡಿದೆ.

   ಬುಧವಾರ ರಾತ್ರಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್ ಸೋಫಿಯಾ ಡಂಕ್ಲಿ ಮತ್ತು ಅಲೈಸ್‌ ಡೇವಿಡ್‌ಸನ್‌ ರಿಚರ್ಡ್ಸ್‌ ಅವರ ಶತಕದ‌ ಜತೆಯಾಟದಿಂದಾಗಿ 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 258 ರನ್ ಗಳಿಸಿತು. ಅದಕ್ಕುತ್ತರವಾಗಿ ಬ್ಯಾಟಿಂಗ್‌ ನಡೆಸಿದ ಭಾರತ ತಂಡವು 48.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 262 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.

   ಚೇಸಿಂಗ್‌ ವೇಳೆ ಭಾರತ ಕೂಡ ಇಂಗ್ಲೆಂಡ್‌ ತಂಡದಂತೆ ಆರಂಭಿಕ ಆಘಾತ ಎದುರಿಸಿತು. 124 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ವೇಳೆ ಜಯ ಕೈತಪ್ಪುವ ಆತಂಕ ಮೂಡಿತು. ಆದರೆ ಈ ಹಂತದಲ್ಲಿ ಜಿಮಿಮಾ ಮತ್ತು ದೀಪ್ತಿ ಶರ್ಮ ತಾಳ್ಮೆಯುತ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ 5ನೇ ವಿಕೆಟ್‌ಗೆ 90 ರನ್‌ ಜತೆಯಾಟ ನಡೆಸಿ ತಂಡವನ್ನು ಪಾರು ಮಾಡಿತು.

   ಜೆಮಿಮಾ 54 ಎಸೆತಗಳಿಂದ 5 ಬೌಂಡರಿ ಸಿಡಿಸಿ 48 ರನ್‌ ಗಳಿಸಿದರು. ಬೌಲಿಂಗ್‌ನಲ್ಲಿ ವಿಕೆಟ್‌ ಲೆಸ್‌ ಎನಿಸಿದ್ದ ದೀಪ್ತಿ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾದರು. ಮೂರು ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ ಅಜೇಯ 62ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಉಪನಾಯಕಿ ಮಂಧಾನ (28), ಪ್ರತೀಕಾ ರಾವಲ್(36) ರನ್‌ ಗಳಿಸಿದರು.

   ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ್ದ ಇಂಗ್ಲೆಂಡ್‌ ಪರ ಡಂಕ್ಲಿ 92 ಎಸೆತಗಳಿಂದ 83 ರನ್‌ (9 ಬೌಂಡರಿ) ಹೊಡೆದರು. ರಕ್ಷಣಾತ್ಮಕ ಆಟವಾಡಿದ ಡೇವಿಡ್‌ಸನ್‌ ರಿಚರ್ಡ್ಸ್‌ 73 ಎಸೆತ ಎದುರಿಸಿ 53 ರನ್‌ ಮಾಡಿದರು. ವನ್‌ಡೌನ್‌ ಆಟಗಾರ್ತಿ ಎಮ್ಮಾ ಲ್ಯಾಂಬ್‌ 39, ನಾಯಕಿ ನ್ಯಾಟ್‌ ಸ್ಕಿವರ್‌ ಬ್ರಂಟ್‌ 41 ರನ್‌ ಕೊಡುಗೆ ಸಲ್ಲಿಸಿದರು. ಭಾರತದ ಪರ ಸ್ನೇಹ್‌ ರಾಣಾ 31ಕ್ಕೆ 2, ಕ್ರಾಂತಿ ಗೌಡ್‌ 55ಕ್ಕೆ 2 ವಿಕೆಟ್‌ ಉರುಳಿಸಿದರು.

Recent Articles

spot_img

Related Stories

Share via
Copy link