ನವದೆಹಲಿ:
ಭಾರತೀಯ ರೂಪಾಯಿ ಚಿಹ್ನೆ ನಾವೆಲ್ಲರೂ ದಿನನಿತ್ಯ ನೋಡುತ್ತೇವೆ. ಅಂಗಡಿಗಳ ಫಲಕಗಳಲ್ಲಿ , ಬ್ಯಾಂಕ್‌ನೋಟುಗಳಲ್ಲಿ , ಇದು ಕಂಡುಬಂದರೂ ಇದರ ಹಿಂದಿನ ಕಥೆಯ ಬಗ್ಗೆ ಯೋಚಿಸುವವರು ಕಡಿಮೆ ಜನ. ಈ ಚಿಹ್ನೆಯ ‘ಬಿಹೈಂಡ್ ದಿ ಸೀನ್ಸ್’ ಕಥೆಯನ್ನು ತಿಳಿಸುವ ಇನ್‌ಸ್ಟಾಗ್ರಾಮ್ ವಿಡಿಯೊ ವೈರಲ್ ಆಗಿದೆ.
2010ರವರೆಗೆ ಭಾರತದ ಕರೆನ್ಸಿಗೆ ಅಧಿಕೃತ ಚಿಹ್ನೆ ಇರಲಿಲ್ಲ. ಕೇವಲ ‘Rs’ ಎಂಬ ಸರಳ ಸಂಕ್ಷೇಪವನ್ನು ಬಳಸಲಾಗುತ್ತಿತ್ತು. ಈ ಕೊರತೆಯನ್ನು ಸರಿಪಡಿಸಲು ಸರ್ಕಾರ ರಾಷ್ಟ್ರೀಯ ವಿನ್ಯಾಸ ಸ್ಪರ್ಧೆಯನ್ನು ಆಯೋಜಿಸಿತು. ಈ ಸ್ಪರ್ಧೆಯಲ್ಲಿ ಯುವ ವಾಸ್ತುಶಿಲ್ಪಿ ಉದಯ್ ಕುಮಾರ್ ವಿಜೇತರಾದರು. ಆತನ ವಿನ್ಯಾಸವು ದೇವನಾಗರಿಯ ‘ರ’ ಮತ್ತು ರೋಮನ್ ‘R’ನ ಸಂಯೋಜನೆಯಾಗಿದ್ದು, ಎರಡು ಗೆರೆಗಳಿಂದ ಸರಳ, ಆಧುನಿಕ ಮತ್ತು ಗುರುತಿಸಬಹುದಾದ ಚಿಹ್ನೆಯಾಗಿತ್ತು. ಈ ವಿನ್ಯಾಸವು ಭಾರತೀಯ ಕರೆನ್ಸಿಯ ಮುಖವಾಯಿತು.
ಆದರೆ ಈ ಕಥೆಗೆ ಇನ್ನೊಂದು ಆಯಾಮವಿದೆ. ಐದು ವರ್ಷಗಳ ಹಿಂದೆ 2005ರಲ್ಲಿ ಮತ್ತೊಬ್ಬ ವಾಸ್ತುಶಿಲ್ಪಿ ನೊಂಡಿತಾ ಕೊರಿಯಾ-ಮೆಹ್ರೋತ್ರ ಇದೇ ಆಲೋಚನೆಯನ್ನು ಹೊಂದಿದ್ದರು. “ಭಾರತಕ್ಕೆ ಏಕೆ ಸ್ವಂತ ಕರೆನ್ಸಿ ಚಿಹ್ನೆ ಇಲ್ಲ?” ಎಂಬ ಪ್ರಶ್ನೆಯನ್ನು ಆಕೆ ಕೇಳಿದ್ದರು. ಡಾಲರ್, ಯೂರೋ, ಯೆನ್‌ನಂತಹ ಚಿಹ್ನೆಗಳು ಕೇವಲ ಮೌಲ್ಯವನ್ನಲ್ಲ, ರಾಷ್ಟ್ರೀಯ ಗೌರವ ಮತ್ತು ಗುರುತನ್ನು ಸಾರುತ್ತವೆ ಎಂದು ಗಮನಿಸಿದ ಆಕೆ, ದೇವನಾಗರಿಯ ‘ರ’ಗೆ ಎರಡು ಸಣ್ಣ ಗೆರೆಗಳಿರುವ ವಿನ್ಯಾಸವನ್ನು ರಚಿಸಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಪ್ರಧಾನಮಂತ್ರಿಯ ಕಚೇರಿಗೆ ಒಪ್ಪಿಗೆಗೆ ಳುಹಿಸಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.
2010ರ ಸ್ಪರ್ಧೆಯಲ್ಲಿ, ಉನ್ನತ ವಿನ್ಯಾಸಗಳಲ್ಲಿ ನೊಂಡಿತಾ ಅವರ 2005ರ ರೇಖಾಚಿತ್ರಕ್ಕೆ ಹೋಲಿಕೆಯಿತ್ತು. ಆಕೆಯೇ ಸ್ಪರ್ಧೆಯಲ್ಲಿ ಭಾಗವಹಿಸಿ ಟಾಪ್ ಫೈವ್‌ಗೆ ಆಯ್ಕೆಯಾದರು. “ಉದಯ್ ಕುಮಾರ್‌ರ ವಿನ್ಯಾಸ ಸರಳ, ಸ್ಪಷ್ಟ, ಮತ್ತು ಗೆಲುವಿಗೆ ಅರ್ಹವಾಗಿತ್ತು. ಆದರೆ, ನೊಂಡಿತಾ ಅವರ ಆರಂಭಿಕ ಯೋಚನೆಯೇ ಈ ಚರ್ಚೆಗೆ ಚಾಲನೆ ನೀಡಿತು” ಎಂದು ವಿಡಿಯೊ ತಿಳಿಸಿದೆ. ಇಬ್ಬರೂ ವಾಸ್ತುಶಿಲ್ಪಿಗಳಾಗಿದ್ದು, ವಿನ್ಯಾಸವು ರಾಷ್ಟ್ರದ ಗುರುತನ್ನು ರೂಪಿಸುವ ಶಕ್ತಿಯನ್ನು ತೋರಿಸಿದೆ.
