ವಿಜಯನಗರ:
ಜಿಲ್ಲೆಯ ಹೊಸಪೇಟೆ ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ 8ರಿಂದ 10 ಗಂಟೆವರೆಗೆ ವಿದ್ಯುತ್ ಇಲ್ಲದೇ ಬಾಣಂತಿಯರು, ನವಜಾತ ಶಿಶುಗಳು ಹಾಗೂ ಪೋಷಕರು ತೀವ್ರ ಪರದಾಟ ಅನುಭವಿಸಿದ ಘಟನೆ ನಡೆದಿದೆ.
ವಿದ್ಯುತ್ ವ್ಯತ್ಯಯದಿಂದಾಗಿ, ಐಸಿಯುನಲ್ಲಿ ಆರೈಕೆಯಲ್ಲಿರುವ ಹಸುಗೂಸುಗಳು, ಬಾಣಂತಿಯರಿಗೆ ತೀವ್ರ ಸಮಸ್ಯೆ ಉಂಟಾಯಿತು. ಬಾಣಂತಿಯರ ಪೋಷಕರು ಮೊಬೈಲ್ ಟಾರ್ಚ್ ಹಾಕಿಕೊಂಡು ಮಕ್ಕಳಿಗೆ ಬಟ್ಟೆಯಿಂದ ಗಾಳಿ ಹಾಕುತ್ತಾ ಆರೈಕೆ ಮಾಡುತ್ತಿರುವುದು ಕಂಡುಬಂತು.ಆಸ್ಪತ್ರೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ವಿದ್ಯುತ್ ಸಮಸ್ಯೆ ಉಂಟಾಗಿತ್ತು. ಬಳಿಕ ಬೇರೆ ಕಡೆಯಿಂದ ಜನರೇಟರ್ ತರಿಸಿ, ಕರೆಂಟ್ ವ್ಯವಸ್ಥೆ ಸುಗಮಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಲ್.ಆರ್. ಶಂಕರ್ ನಾಯ್ಕ, ”ಸುಮಾರು ಎರಡು ತಾಸು ವಿದ್ಯುತ್ ಕೈಕೊಟ್ಟಿದ್ದು ನಿಜ, ನಾವು ಅಲ್ಲೇ ಇದ್ದೆವು. ವಿದ್ಯುತ್ ವೈಫಲ್ಯಕ್ಕೆ ಕಾರಣ ತಿಳಿಯಲು ಜೆಸ್ಕಾಂನವರೂ ಪ್ರಯತ್ನಪಟ್ಟರು. ಕೊನೆಗೆ ಬೇರೆ ಕಡೆಯಿಂದ ಜನರೇಟರ್ ಸಹ ತರಿಸಿದೆವು. ಇದೀಗ ಎಲ್ಲವೂ ಸರಿಯಾಗಿದೆ. ಬಾಣಂತಿಯರು, ಮಕ್ಕಳಿಗೆ ಯಾವುದೇ ರೀತಿ ತೊಂದರೆ ಆಗಿಲ್ಲ” ಎಂದು ಹೇಳಿದ್ದಾರೆ.
