ಬೆಂಗಳೂರು
ಬೆಂಗಳೂರಿನ ಬೇಕರಿಗಳು, ಕಾಂಡಿಮೆಂಡ್ಸ್, ಚಹಾ ಅಂಗಡಿಗಳಿಗೆ ತೆರಿಗೆ ನೋಟಿಸ್ ನೀಡಿದ್ದ ವಾಣಿಜ್ಯ ತೆರಿಗೆ ಇಲಾಖೆ , ಆ ನಂತರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿತ್ತು. ವಾರ್ಷಿಕ ವಹಿವಾಟು 1.5 ಕೋಟಿಗಿಂತ ಕಡಿಮೆ ಇದ್ದರೆ ಅಂತಹ ವರ್ತಕರು ಕೇವಲ ಶೇ 1 ರಷ್ಟು ಮಾತ್ರ ತೆರಿಗೆ ಪಾವತಿಸಬಹು. ಕಂಪೋಸಿಷನ್ ಟ್ಯಾಕ್ಸ್ ಸ್ಕೀಮ್ ಆಯ್ಕೆ ಮಾಡಿ ವಿನಾಯಿತಿ ಪಡೆಯಬಹುದು ಎಂದಿತ್ತು. ಇದೀಗ ಮತ್ತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಬಾರಿಯೂ ತೆರಿಗೆ ನೋಟಿಸ್ ಬಗ್ಗೆ ಸ್ಪಷ್ಟನೆ ನೀಡಿದ್ದಲ್ಲದೆ, ವರ್ತಕರು ಏನು ಮಾಡಬೇಕು ಎಂಬ ಸಲಹೆ ನೀಡಿದೆ.
ವರ್ತಕರು ನೋಟಿಸ್ ಬಂದಿರುವ ಕಚೇರಿಗೆ ತೆರಳಿ ಸೂಕ್ತ ದಾಖಲಾತಿ ನೀಡಿ ವಿವರಣೆ ನೀಡಬೇಕು. ತೆರಿಗೆ ವಿನಾಯಿತಿ ಇರುವ ಸರಕು ಸೇವೆಗಳನ್ನು ಹೊರತುಪಡಿಸಿ, ತೆರಿಗೆ ಇರುವ ಸರಕಿಗೆ ಮಾತ್ರ ತೆರಿಗೆ ವಿಧಿಸುತ್ತಾರೆ. ಈಗಾಗಲೇ 40 ಲಕ್ಷ ವಹಿವಾಟು ಮೇಲ್ಪಟ್ಟವರು ಜಿಎಸ್ಟಿ ನೋಂದಣಿ ಪಡೆದುಕೊಳ್ಳಬೇಕು. ಈಗಾಗಲೇ ಶೇ 90 ರಷ್ಟು ವ್ಯಾಪಾರಿಗಳು ರಾಜಿ ತೆರಿಗೆ ಪದ್ಧತಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಹೀಗಾಗಿ ಶೇ 10 ರಷ್ಟು ವರ್ತಕರು ತೆರಿಗೆ ಪಾವತಿ ಮಾಡದೇ ಇರುವುದು ಸರಿಯಲ್ಲ. ಅದು ತಾರತಮ್ಯ ಮಾಡಿದಂತಾಗುತ್ತದೆ ಎಂದು ವಾಣಿಜ್ಯ ತೆರಿಗೆ ಪ್ರಕಟಣೆ ತಿಳಿಸಿದೆ.
ವರ್ತಕರಲ್ಲಿ ಅರಿವು ಮೂಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜತೆಗೆ, ಹೊಸದಾಗಿ ಜಿಎಸ್ಟಿ ನೋಂದಣಿ ಮಾಡಿಕೊಳ್ಳುವವರಿಗೆ ಸರಳ ವ್ಯವಸ್ಥೆಯಡಿ ಸುಸೂತ್ರವಾಗಿ ನಡೆಸಿ ಕೊಡುವಂತೆ ಸೂಚನೆ ನೀಡಲಾಗಿದೆ. ಯಾವುದೇ ರೀತಿ ವರ್ತಕರಿಗೆ ತೊಂದರೆಯಾಗದಂತೆ ನೋಂದಣಿ ಮಾಡಿಸಲು ಸೂಚನೆ ಕೊಟ್ಟಿದ್ದೇವೆ. ರಾಜ್ಯದಲ್ಲಿ 98,915 ವರ್ತಕರಿಂದ ಕಂಪೋಸಿಷನ್ ಟ್ಯಾಕ್ಸ್ ಸ್ಕೀಮ್ ನಡಿ ನೋಂದಣಿ ಮಾಡಿಕೊಳ್ಳಲಾಗಿದೆ. ಕಂಪೋಸಿಷನ್ ಸ್ಕೀಮ್ನಡಿ ಶೇ 1 ರ ತೆರಿಗೆ ಪಾವತಿಗೆ ಅವಕಾಶ ಇದೆ. ಇದರಿಂದ ವರ್ತಕರಿಗೆ ಸಮಸ್ಯೆಯಾಗದು ಎಂದು ಇಲಾಖೆ ಹೇಳಿದೆ.
ಏಕಾಏಕಿ 2-3 ವರ್ಷಗಳ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿರುವುದಕ್ಕೆ ಬೆಂಗಳೂರಿನಲ್ಲಿ ವರ್ತಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜುಲೈ 25 ರಂದು ನಮ್ಮ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಧರಣಿ ನಡೆಸಲು ಬೆಂಗಳೂರಿನ ವರ್ತಕರು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ, ತೆರಿಗೆ ಇಲಾಖೆ ಈಗ ವರ್ತಕರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದೆ. ಬೆಂಗಳೂರಿನ ಅನೇಕ ವರ್ಕತರಿಗೆ ಕೆಲವು ದಿನಗಳ ಹಿಂದೆ ವಾಣಿಜ್ಯ ಇಲಾಖೆಯಿಂದ ತೆರಿಗೆ ನೋಟಿಸ್ ಬಂದಿದೆ. ಕಳೆದ ನಾಲ್ಕೈದು ವರ್ಷಗಳಿಂದ ಲಕ್ಷಾಂತರ ರೂಪಾಯಿ ವ್ಯಾಪಾರ ವಹಿವಾಟು ಮಾಡಿರುವ ನೀವು, ಅದಕ್ಕಾಗಿ ಕಮರ್ಷಿಯಲ್ ಟ್ಯಾಕ್ಸ್ ಪಾವತಿ ಮಾಡಬೇಕು ಎಂದು ನೋಟಿಸ್ಗಳನ್ನು ನೀಡಲಾಗಿತ್ತು. ಏಕಾಏಕಿ ಲಕ್ಷಾಂತರ ರೂ. ತೆರಿಗೆ ಪಾವತಿಗೆ ಸೂಚಿಸಿರುವುದರಿಂದ ವ್ಯಾಪಾರಿ ವರ್ಗದವರು ಕಂಗಾಲಾಗಿದ್ದಾರೆ.
