ರಾಯ್ಪುರ:
ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಪುತ್ರನ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಶುಕ್ರವಾರ ಭೂಪೇಶ್ ಭಘೇಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದು, ತೀವ್ರ ಶೋಧ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ರಾಯ್ಪುರದ ಭಿಲಾಯಿ ಪಟ್ಟಣದಲ್ಲಿ ತಂದೆ ಭೂಪೇಶ್ ಭಘೇಲ್ ಅವರೊಂದಿಗೆ ಚೈತನ್ಯ ಭಘೇಲ್ ಅವರು ವಾಸವಿದ್ದು, ಇದರಂತೆ ಅಧಿಕಾರಿಗಳು, ಜಾರಿ ನಿರ್ದೇಶನಾಲಯ (ED) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಶೋಧ ನಡೆಸುತ್ತಿದೆ. ಮಾರ್ಚ್ ತಿಂಗಳಿನಲ್ಲಿಯೂ ಇಡೀ ಚೈತನ್ಯ ಭಘೇಲ್ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು.
ಇನ್ನು ಇಡಿ ದಾಳಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಭೂಪೇಶ್ ಭಘೇಲ್ ಅವರು, ಅಧಿಕಾರಿಗಳ ನಡೆ ಕುರಿತು ವ್ಯಂಗ್ಯವಾಡಿದ್ದಾರೆ.ಇಡಿ ಬಂದಿದೆ. ಇಂದು ವಿಧಾನಸಭೆ ಅಧಿವೇಶನದ ಕೊನೆಯ ದಿನ. ಅದಾನಿ ವಿಚಾರವನ್ನು ಪ್ರಸ್ತಾಪಿಸಬೇಕಿತ್ತು. ಅಷ್ಟರಲ್ಲಾಗಲೇ “ಸಾಹೇಬರು” ಭಿಲಾಯ್ ನಿವಾಸಕ್ಕೆ ಇಡಿ ಕಳುಹಿಸಿದ್ದಾರೆಂದು ವ್ಯಂಗ್ಯವಾಡಿದ್ದಾರೆ
