ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಿಎಸ್ಐ ಕೀರಪ್ಪ ಗಟಕಂಬಳಿ ಬಂಟ್ವಾಳ ಪೇಟೆಯಲ್ಲಿದ್ದ ತಮ್ಮ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ನಿನ್ನೆ ಬೆಳಗ್ಗೆ ಡ್ಯೂಟಿಗೆ ಗೈರಾಗಿದ್ದ ಪಿಎಸ್ಐ ಮನೆಯಲ್ಲೇ ಇದ್ದರು. ಪೊಲೀಸ್ ಠಾಣೆ ಸಿಬ್ಬಂದಿ ಕಾಲ್ ಮಾಡಿದ್ರೂ ರಿಸೀವ್ ಮಾಡಿರಲಿಲ್ಲ. ಸಂಜೆ ಅವರ ಬಾಡಿಗೆ ಮನೆಗೆ ಹೋಗಿದ್ದಾಗ, ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಆಗಿದ್ದ ಕೀರಪ್ಪ ಗಟಕಂಬಳಿ ಬಂಟ್ವಾಳ ಪೇಟೆಯಲ್ಲಿದ್ದ ಬಾಡಿಗೆ ಮನೆಯಲ್ಲಿದ್ದರು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಿವಾಸಿಯಾಗಿದ್ದ 54 ವರ್ಷದ ಕೀರಪ್ಪ ಗಟಕಂಬಳಿ ಇಲ್ಲಿ ಒಬ್ಬರೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅವರ ಇಡೀ ಕುಟುಂಬ ಕಾರವಾರದಲ್ಲೇ ಇತ್ತು. ಇವರು ಶಿರಸಿ ಪೊಲೀಸ್ ಠಾಣೆಯಿಂದ ಕಳೆದ 5 ತಿಂಗಳ ಹಿಂದಷ್ಟೇ ವರ್ಗಾವಣೆಯಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದಿದ್ದು, ಬಂಟ್ವಾಳದ ತನಿಖಾ ವಿಭಾಗದ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.