ಕಾರವಾರ:
ಸೋಮವಾರ ಬೆಳಗಿನ ಜಾವ ಖಾಸಗಿ ಬಸ್ಸೊಂದು ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಉರುಳಿಬಿದ್ದ ಪರಿಣಾಮ ಒಬ್ಬರು ಸಾವಿಗೀಡಾಗಿದ್ದು, 21 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತರನ್ನು ಹುಬ್ಬಳ್ಳಿ ನಿವಾಸಿ ವಿನಾಯಕ ಶಿಂಧೆ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಅಗಸೂರು ಗ್ರಾಮದ ಬಳಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪ್ರಯಾಣಿಕರನ್ನು ಹೊತ್ತು ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ.
ಪ್ರಾಥಮಿಕ ತನಿಖೆಯನ್ನು ಉಲ್ಲೇಖಿಸಿ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಚಾಲಕ ಅತಿವೇಗದಿಂದ ಬಸ್ ಚಲಾಯಿಸುತ್ತಿದ್ದರು ಎಂದು ತಿಳಿಸಿದ್ದಾರೆ ಮತ್ತು ಬಸ್ಸಿನ ಸಂಸ್ಥೆಯವರು ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.
ರಸ್ತೆಯಲ್ಲಿದ್ದ ಗುಂಡಿಗಳನ್ನು ತಪ್ಪಿಸಲು ಪ್ರಯತ್ನಿಸುವಾಗ, ಆತನ ನಿಯಂತ್ರಣ ಕಳೆದುಕೊಂಡ ಬಸ್ ಸೇತುವೆಗೆ ಡಿಕ್ಕಿ ಹೊಡೆದು, ಪಲ್ಟಿಯಾಗಿ ಹೊಳೆಗೆ ಬಿದ್ದಿದೆ. ಸ್ಥಳೀಯರ ಸಹಾಯದಿಂದ ಪೊಲೀಸರು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಅವರು ಹೇಳಿದರು.ಕ್ರೇನ್ ಸಹಾಯದಿಂದ ಬಸ್ಸನ್ನು ಹೊಳೆಯಿಂದ ಹೊರತೆಗೆಯಲಾಯಿತು ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
