ಭುವನೇಶ್ವರ್:
ಒಡಿಶಾದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಮದ್ಯ ಬೆರೆಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗದ ಒಡಿಶಾ ಘಟಕದ ಅಧ್ಯಕ್ಷ ಉದಿತ್ ಪ್ರಧಾನ್ ಎಂಬಾತನನ್ನು ಭುವನೇಶ್ವರದ ಮಂಚೇಶ್ವರ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ತಡರಾತ್ರಿ ಪ್ರಧಾನನ್ನು ವಶಕ್ಕೆ ಪಡೆಯಲಾಗಿದೆ. ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆಯಿದೆ. ಸಂತ್ರಸ್ತೆಯೇ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ.
ದೂರಿನ ಪ್ರಕಾರ, ಈ ಘಟನೆ ಈ ವರ್ಷ ಮಾರ್ಚ್ 18 ರಂದು ನಡೆದಿತ್ತು. ನಾನು ಹಾಗೂ ಇಬ್ಬರು ಸ್ನೇಹಿತರು ಭುವನೇಶ್ವರದ ಮಾಸ್ಟರ್ ಕ್ಯಾಂಟೀನ್ ಪ್ರದೇಶದ ಬಳಿ ಪ್ರಧಾನ್ ಅವರನ್ನು ಭೇಟಿಯಾದೆವು. ನಂತರ ಅವರ ವಾಹನದಲ್ಲಿ ನಾಯಪಲ್ಲಿಯ ಹೋಟೆಲ್ಗೆ ತೆರಳಿತು. ಹೋಟೆಲ್ನಲ್ಲಿ, ಗುಂಪಿನಲ್ಲಿದ್ದ ಇತರರು ಮದ್ಯ ಸೇವಿಸಿದರು. ನನಗೂ ಕೂಡ ಕುಡಿಯಲು ಹೇಳಿದರು, ಆದರೆ ನಾನು ಅದನ್ನು ನಿರಾಕರಿಸಿದೆ. ಬಳಿಕ ಬೇರೆ ಪಾನೀಯ ನೀಡಲಾಯಿತು . ಅದರಲ್ಲಿ ಮದ್ಯ ಬೆರೆಸಲಾಗಿತ್ತು. ಕೊನೆಗೆ ನಾನು ಪ್ರಜ್ಞೆ ಕಳೆದುಕೊಂಡೆ. ಆಗ ಪ್ರಧಾನ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ತಿಂಗಳುಗಳ ನಂತರ ಮಹಿಳೆ ಪೊಲೀಸ್ ದೂರು ದಾಖಲಿಸಿದ್ದು, ತಾನು ಮೊದಲು ಮುಂದೆ ಬರಲು ಹೆದರುತ್ತಿದ್ದೆ ಎಂದು ಹೇಳಿದ್ದಾರೆ. ಎಫ್ಐಆರ್ ದಾಖಲಾದ ನಂತರ, ಪೊಲೀಸರು ಕ್ರಮ ಕೈಗೊಂಡು ಅದೇ ರಾತ್ರಿ ಪ್ರಧನನನ್ನು ಬಂಧಿಸಿದರು. ಬಂಧನದ ಸುದ್ದಿ ಹರಡಿದ ನಂತರ, ಪ್ರಧಾನ್ ಕುಟುಂಬ ಸದಸ್ಯರು ಮತ್ತು ವಿದ್ಯಾರ್ಥಿ ಕಾಂಗ್ರೆಸ್ ಬೆಂಬಲಿಗರು ಸೇರಿದಂತೆ ಸುಮಾರು 50 ಜನರ ಗುಂಪು ಮಂಚೇಶ್ವರ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿತು. ಸ್ಥಳದಲ್ಲಿ ನಿಯೋಜಿಸಲಾದ ಪೊಲೀಸರು ಆವರಣಕ್ಕೆ ಪ್ರವೇಶವನ್ನು ನಿರ್ಬಂಧಿಸಿದರು.
ಇತ್ತೀಚೆಗೆ ಕೋಲ್ಕತ್ತಾದಲ್ಲಿಯೂ ಇದೇ ರೀತಿಯ ಪ್ರಕರಣ ನಡೆದಿತ್ತು. ಕ್ಲಿನಿಕಲ್ ಮನಶ್ಶಾಸ್ತ್ರಜ್ಞೆಯಾಗಿರುವ ವಿದ್ಯಾರ್ಥಿನಿ ಮೇಲೆ ಆರೋಪಿಯು ಕೌನ್ಸೆಲಿಂಗ್ ಅವಧಿಗಾಗಿ ಹಾಸ್ಟೆಲ್ಗೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ್ದ. ಆರೋಪಿಯು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ನಿವಾಸಿಯಾಗಿದ್ದಾನೆ. ಕೋಲ್ಕತ್ತಾದ ಐಐಎಂ ಕಾನೂನು ಕಾಲೇಜಿನಲ್ಲಿ ಓದುತ್ತಿರುವ ಪರಮಾನಂದ, ಅದೇ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪವಿದೆ.
ವಿದ್ಯಾರ್ಥಿನಿಯನ್ನು ಹಾಸ್ಟೆಲ್ಗೆ ಕರೆಸಿಕೊಂಡು ಮತ್ತು ಬರುವ ಪಾನೀಯ ಕುಡಿಸಿ ಅತ್ಯಾಚಾರವೆಸಗಿರುವ ಆರೋಪವಿದೆ. ಕೌನ್ಸೆಲಿಂಗ್ ಅವಧಿಗೆಂದು ಹಾಸ್ಟೆಲ್ಗೆ ಕರೆಸಲಾಗಿತ್ತು. ನಂತರ ಹಾಸ್ಟೆಲ್ನಲ್ಲಿ ಮಾದಕ ದ್ರವ್ಯ ಬೆರೆಸಿದ ಪಾನೀಯ ನೀಡಿದ್ದರು. ಅದನ್ನು ಸೇವಿಸಿದ ನಂತರ ಪ್ರಜ್ಞೆ ತಪ್ಪಿತ್ತು. ಪ್ರಜ್ಞೆ ಮರಳಿದ ನಂತರ ಅತ್ಯಾಚಾರ ನಡೆದಿರುವುದು ಅರಿವಾಯಿತು ಎಂದು ದೂರಿನಲ್ಲಿ ಸಂತ್ರಸ್ತೆ ಹೇಳಿದ್ದಾಳೆ.
