ಗದಗ:
ಒಂದೇ ಬೈಕ್ ನಲ್ಲಿ ನಾಲ್ವರು ಪ್ರಯಾಣ ಮಾಡುತ್ತಿದ್ದ ವೇಳೆ ಓವರ್ ಸ್ಪೀಡ್ ನಲ್ಲಿ ಡಿವೈಡರ್ ಗೆ ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಮೂವರಿಗೆ ಗಂಭೀರ ಗಾಯವಾದ ಘಟನೆ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಬಳಿ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ನಡೆದಿದೆ. KA27 EV-8034 ನಂಬರ್ ನ ದ್ವಿಚಕ್ರ ವಾಹನ ಇದಾಗಿದೆ. 36 ವರ್ಷದ ಗಣೇಶ ಸೋಮಪ್ಪ ನ್ಯಾರಲಘಂಟಿ ಮೃತ ಯುವಕ. ಮೃತ ಹಾಗೂ ಗಾಯಾಳು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ದ್ಯಾಮನಕೊಪ್ಪ ನಿವಾಸಿಗಳು. ಹಾವೇರಿಯಿಂದ ಕೊಪ್ಪಳಕ್ಕೆ ಹೊರಟಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಅತಿಯಾದ ವೇಗವೆ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.
ಬೈಕ್ ನ ಮುಂಭಾಗದ ವ್ಹೀಲ್ ಕಿತ್ತುಹೋಗಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ಬೈಕ್ ಹಿಂಬದಿ ಕುಳಿತ ಸಹೋದರಿ, ವೃಧ್ಧ ತಂದೆ ಹಾಗೂ 4 ವರ್ಷದ ಮಗುವಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮುಂಡರಗಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
