ಅತಿಥಿ ಉಪನ್ಯಾಸಕರ ಜಾಥಾಗೆ ಚಾಲನೆ : ಅಗತ್ಯ ಬಿದ್ದರೆ ಹೋರಾಟಕ್ಕೆ ರಾಜ್ಯದ ಮಠಾಧೀಶರ ಬೆಂಬಲ: ತೋಂಟದ ಶ್ರೀ

ಗದಗ:

    ಹದಿನೈದು ವರ್ಷ ಸೇವೆ ಸಲ್ಲಿಸುವಾಗ ಏಳದ ಅರ್ಹತೆಯ ಪ್ರಶ್ನೆ ಈಗೇಕೆ? ಅತಿಥಿ ಉಪನ್ಯಾಸಕ ಬದುಕು ಬೀದಿಗೆ ಬೀಳುವ ಪ್ರಸಂಗ ಬಂದರೆ ಸರಕಾರಕ್ಕೆ ತಿಳಿ ಹೇಳುತ್ತೇವೆ. ಅಗತ್ಯ ಬಿದ್ದರೆ ರಾಜ್ಯದ ಎಲ್ಲ ಮಠಾಧೀಶರು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹೋರಾಟವನ್ನು ಬೆಂಬಲಿಸುತ್ತೇವೆ ಎಂದು ಜ.ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

    ನಗರದ ತೋಂಟದಾರ್ಯ ಮಠದ ಸಭಾಂಗಣದಲ್ಲಿ ಮಂಗಳವಾರ ನಡೆದ ಅತಿಥಿ ಉಪನ್ಯಾಸಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಹದಿನೈದು ವರ್ಷಗಳಿಂದ ಅರ್ಹತೆ ಇಲ್ಲದವರಿಂದ ಪಾಠ ಮಾಡಿಸಿದ್ದು ಸರಕಾರದ ಮಹಾ ತಪ್ಪು. ಈಗ ಅವರನ್ನು ಅನರ್ಹ ಎಂದು ತಿರಸ್ಕರಿಸುವುದು ಸಮಂಜಸವಲ್ಲ. ಹೋರಾಟದ ನೆಲದಲ್ಲಿ ಚಳವಳಿಯ ಹೆಜ್ಜೆ ಶುರುವಾಗಿದ್ದು, ಅತಿಥಿ ಉಪನ್ಯಾಸಕರ ಎಲ್ಲ ಬೇಡಿಕೆಗಳು ಈಡೇರಲಿ, ಬದುಕು-ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

    ವಿಧಾನ ಪರಿಷತ್ ಸದಸ್ಯ ಎಸ್. ವಿ.ಸಂಕನೂರು ಮಾತನಾಡಿ, ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವೆ. ಬೆಳಗಾವಿ ಅಧಿವೇಶನದ ವೇಳೆ ಅತಿಥಿ ಉಪನ್ಯಾಸಕರ ಹೋರಾಟ ಸರಕಾರವನ್ನೇ ನಡುಗಿಸಿತ್ತು ಎಂದು ಸ್ಮರಿಸಿದರು.

    ಪ್ರತಿ ಸಮಸ್ಯೆಗೆ ಪರಿಹಾರ ಇದ್ದೇ ಇದೆ. ಕಾನೂನು ತೊಡಕಿದ್ದರೆ ಬಗೆಹರಿಸುವ ಇಚ್ಛಾಶಕ್ತಿ ಸರಕಾರಕ್ಕೆ ಬೇಕು. ಈ ಬಗ್ಗೆ ವಿಶೇಷ ಕಾನೂನು ನಿಯಮ ರೂಪಿಸಿ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಸರಕಾರ ಆ ನಿಟ್ಟಿನಲ್ಲಿ ಯೋಚಿಸಬೇಕೇ ಹೊರತು ನ್ಯಾಯಾಲಯದ ಆದೇಶ ಪಾಲಿಸಬೇಕು ಎಂದು ಹೇಳುತ್ತಾ ಸಮಯ ದೂಡುವುದಲ್ಲ. ಉನ್ನತ ಶಿಕ್ಷಣ ಇಲಾಖೆ ಹೀಗೇ ಹೇಳುತ್ತಾ ಸಹಸ್ರಾರು ಅತಿಥಿ ಉಪನ್ಯಾಸಕರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ ಎಂದು ಹರಿ ಹಾಯ್ದರು.

    ವಿಶೇಷ ಕಾನೂನು ರೂಪಿಸಿ ಸದನದ ಎರಡು ಮನೆಗಳಲ್ಲಿ ಮಸೂದೆ ಅಂಗೀಕಾರಗೊಳಿಸಿದರೆ ಸಮಸ್ಯೆ ಇತ್ಯರ್ಥ ಆಗುತ್ತೆ. ಸರಕಾರ ಮನಸು ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಉನ್ನತ ಶಿಕ್ಷಣ ಇಲಾಖೆ ಸಚಿವರು ಅತಿಥಿ ಉಪನ್ಯಾಸಕರ ವಿರುದ್ಧ ಇಲ್ಲ. ಆದರೆ ಯಾರು ವಿರೋಧಿಸುತ್ತಿದ್ದಾರೋ ಗೊತ್ತಾಗುತ್ತಿಲ್ಲ.ನಿಯಮ 72ರಡಿ ಅರ್ಧ ಗಂಟೆ ಚರ್ಚಿಸಲು ಪರಿಷತ್‌ನಲ್ಲಿ ಒತ್ತಾಯಿಸುತ್ತೇನೆ ಎಂದು ಸಂಕನೂರು ಭರವಸೆ ನೀಡಿದರು‌.

    ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಹನುಮಂತಗೌಡ ಕಲ್ಮನಿ ಮಾತನಾಡಿ, ಸರಕಾರ ಕಳೆದೆರಡು ವರ್ಷಗಳಿಂದ ಅತಿಥಿ ಉಪನ್ಯಾಸಕರಲ್ಲೇ ಒಡಕುಂಟು ಮಾಡುವ ಕೆಲಸಕ್ಕೆ ಕೈ ಹಾಕಿದೆ. ಸಿಎಂ ಮತ್ತು ಉನ್ನತ ಶಿಕ್ಷಣ ಇಲಾಖೆ ಸಚಿವರು ಅತಿಥಿ ಉಪನ್ಯಾಸಕರ ಪರವಾಗಿದ್ದರೂ ಅವರನ್ನು ದಾರಿ ತಪ್ಪಿಸುವ ಕೆಲಸ ಕೆಲವರಿಂದ ಆಗುತ್ತಿದೆ. ಕೂಡಲೇ ಶೈಕ್ಷಣಿಕ ಅರ್ಹತೆ ಮುಂದಿಟ್ಟುಕೊಂಡು ಮಾಡುತ್ತಿರುವ ತಾರತಮ್ಯ ನೀತಿ ಕೈ ಬಿಡಬೇಕು. ಎಲ್ಲರಿಗೂ ಅನ್ವಯವಾಗುವಂತೆ ಈ ಹಿಂದಿನಂತೆ ಸಾಮಾನ್ಯ ಕೌನ್ಸೆಲಿಂಗ್ ಮಾಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.

   ಅತಿಥಿ ಉಪನ್ಯಾಸಕರನ್ನು ಕೋರ್ಟ್‌ಗೆ ಹೋಗುವಂತೆ ಪುಸಲಾಯಿಸುವ ಕೆಲವರು, ವಕೀಲರನ್ನು ಉದ್ಧಾರ ಮಾಡುತ್ತಾ, ತಾವೂ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕೂಡಲೇ ಇಂಥವು ನಿಲ್ಲಬೇಕು. ಈ ಹಿಂದಿನಂತೆ ಜನರಲ್ ಕೌನ್ಸೆಲಿಂಗ್ ಆಗಬೇಕು. ಜನರಲ್ ಕೌನ್ಸೆಲಿಂಗ್ ಮೂಲಕ ಆಯ್ಕೆಯಾಗುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ಸೇವೆ ಕಾಯಂಗೊಳಿಸಬೇಕು‌‌‌. ಬೇಡಿಕೆ ಈಡೇರುವವರೆಗೂ ವಿರಮಿಸುವುದಿಲ್ಲ. ಇದು ಹೋರಾಟದ ಒಂದು ಹೆಜ್ಹೆ ಮಾತ್ರ. ಹೋರಾಟದ ಹಾದಿ ದೊಡ್ಡದಿದೆ ಎಂದು ಎಚ್ಚರಿಸಿದರು.

   ಸರಕಾರಿ ನೌಕರರ ಸಂಘದ ಜಿಲ್ಲೆಯ ನೂತನ ಅಧ್ಯಕ್ಷ ಬಸವರಾಜ ಬಳ್ಳಾರಿಯವರನ್ನು ಸತ್ಕರಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು. ತೋಂಟದಾರ್ಯ ಮಠದಿಂದ ಸಚಿವರ ಕಚೇರಿವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಗಣ್ಯರು ಚಾಲನೆ ನೀಡಿದರು. ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು‌.

Recent Articles

spot_img

Related Stories

Share via
Copy link