ಗದಗ:
ಕೆಲವು ರಾಜಕಾರಣಿಗಳಿಗೆ ಭಾಷಣ ಮಾಡುವ ವೇಳೆ ಯಾವ ಕಾರ್ಯಕ್ರಮದಲ್ಲಿ ಯಾವ ಭಾಷಣ ಮಾಡಬೇಕು ಎನ್ನುವ ಅರಿವು ಇರುವುದಿಲ್ಲ. ಇಲ್ಲೊಬ್ಬ ಮಾಜಿ ಶಾಸಕರು ನೂತನವಾಗಿ ನಿರ್ಮಾಣಗೊಳ್ಳಲಿರುವ ತಾಲೂಕ ಆಸ್ಪತ್ರೆಯನ್ನು ಸಾರ್ವಜನಿಕರು ದುರುಪಯೋಗ ಪಡಿಸಿಕೊಳ್ಳಬೇಕು ಅಂತ ಕರೆ ನೀಡಿದ್ದಾರೆ.
ಈ ವೇಳೆ ವೇದಿಕೆಯಲ್ಲಿ ಕುಳಿತಿದ್ದ ಸುಜಾತಾ ದೊಡ್ಡಮನಿ ತಕ್ಷಣವೇ ಎದ್ದು ಬಂದು ಅದು ದುರುಪಯೋಗ ಅಲ್ಲ, ಸದುಪಯೋಗ ಅನ್ನಿ ಅಂದಾಗ ಮಾಜಿ ಶಾಸಕ ರಾಮಣ್ಣ ಲಮಾಣಿ ಎಚ್ಚೆತ್ತುಕೊಂಡು ಸದುಪಯೋಗಪಡಿಸಿಕೊಳ್ಳಿ ಅಂತ ಹೇಳಿದರು. ಇದೇ ವೇಳೆ ಮತ್ತೊಂದು ಎಡವಟ್ಟು ಮಾಡಿದವರು 85 ಲಕ್ಷ ರೂಪಾಯಿ ನೀಡಿ 6 ಎಕರೆ ಜಮೀನು ಖರೀದಿಸಿದ್ದನ್ನು 85 ಸಾವಿರ ರೂಪಾಯಿಗೆ ಖರೀದಿ ಮಾಡಿದ್ದೇವೆ ಎಂದರು.
ಪಕ್ಕದಲ್ಲೇ ಇದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್ ಎಸ್ ನೀಲಗುಂದ ಅವರು ಸರ್ ಅದು 85 ಸಾವಿರ ಅಲ್ಲ, 85 ಲಕ್ಷ ಎಂದಾಗ ಪುನಃ ಅದನ್ನು ಸರಿಪಡಿಸಿಕೊಂಡು ಮಾತನಾಡಿದರು. ಒಟ್ಟಾರೆಯಾಗಿ ಮಾಜಿ ಶಾಸಕರ ಮಾತಿನಿಂದ ನಗಬೇಕೋ, ಅಳಬೇಕೋ ಎನ್ನುವುದು ತಿಳಿಯದಂತೆ ಜನರು ಕುಳಿತಿದ್ದರು.
