ಬೆಂಗಳೂರು:
ಕಾಂಗ್ರೆಸ್ ಮುಖಂಡ ಮತ್ತು ಉದ್ಯಮಿ ಕೆಜಿಎಫ್ ಬಾಬುಗೆ ಬೆಳ್ಳಂಬೆಳಗ್ಗೆ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬೆಂಗಳೂರಿನ ವಸಂತನಗರದಲ್ಲಿರುವ ಬಾಬು ಮನೆಗೆ ಮುಂಜಾನೆ ದಾಳಿ ನಡೆಸಿದ ಆರ್ಟಿಒ ಅಧಿಕಾರಿಗಳು, ಬಾಬುಗೆ ಸೇರಿದ ಐಷಾರಾಮಿ ಕಾರುಗಳನ್ನು ಸೀಜ್ ಮಾಡಿಕೊಂಡಿದ್ದಾರೆ. ಕೆಜಿಎಫ್ ಮಾಲೀಕತ್ವದ ಐಷಾರಾಮಿ ಕಾರುಗಳಾದ ರೋಲ್ಸ್ ರಾಯ್ಸ್, ವೆಲ್ಫೇರ್ ಸೇರಿದಂತೆ ಹಲವು ಕಾರುಗಳಿಗೆ ತೆರಿಗೆ ಪಾವತಿಸಿಲ್ಲ ಎಂಬುದು ಅವರ ಮೇಲಿರುವ ಆರೋಪ.
ಐಷಾರಾಮಿ ಕಾರುಗಳ ತೆರಿಗೆ ವಂಚನೆ ಆರೋಪದಡಿಯಲ್ಲಿ ಕಾರುಗಳನ್ನು ಸೀಜ್ ಮಾಡಲು ಆರ್ಟಿಓ ತಂಡ ಆಗಮಿಸಿದೆ. ಈ ದಾಳಿಯನ್ನು ಆರ್ಟಿಓ ಜಂಟಿ ಆಯುಕ್ತೆ ಶೋಭಾ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ನಡೆಸಿದೆ. ಈ ಕಾರುಗಳು ಕರ್ನಾಟಕದಲ್ಲಿ ಓಡಾಡುತ್ತಿದ್ದರೂ, ಇವುಗಳನ್ನು ಇತರ ರಾಜ್ಯಗಳಲ್ಲಿ ನೋಂದಾಯಿಸಲಾಗಿದ್ದು, ಕರ್ನಾಟಕದ ರಸ್ತೆ ತೆರಿಗೆಯನ್ನು ಪಾವತಿಸಿಲ್ಲ ಎಂದು ಆರೋಪಿಸಲಾಗಿದೆ. ಕರ್ನಾಟಕದ ಮೋಟಾರು ವಾಹನ ಕಾಯ್ದೆಯ ಪ್ರಕಾರ, ರಾಜ್ಯದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಳಸುವ ವಾಹನಗಳು ಸ್ಥಳೀಯ ತೆರಿಗೆಯನ್ನು ಪಾವತಿಸಬೇಕು.
ಕೆಜಿಎಫ್ ಬಾಬು ಎಂದೇ ಖ್ಯಾತರಾದ ಯೂಸುಫ್ ಶರೀಫ್, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ದೊಡ್ಡ ಹೆಸರಾಗಿದ್ದಾರೆ. 2021ರ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು, 1,744 ಕೋಟಿ ರೂಪಾಯಿಗಳ ಆಸ್ತಿಯನ್ನು ಘೋಷಿಸಿದ್ದರು. ಈ ಆಸ್ತಿಯಲ್ಲಿ ರೋಲ್ಸ್ ರಾಯ್ಸ್ ಸೇರಿದಂತೆ ಹಲವು ಐಷಾರಾಮಿ ಕಾರುಗಳು ಸೇರಿವೆ.
ಆರ್ಟಿಓ ಜಂಟಿ ಆಯುಕ್ತೆ ಶೋಭಾ ನೇತೃತ್ವದಲ್ಲಿ ತಂಡವು ಕೆಜಿಎಫ್ ಬಾಬು ಅವರ ವಸಂತನಗರದ ಮನೆಗೆ ಆಗಮಿಸಿದೆ. ಈ ದಾಳಿಯ ಸಂದರ್ಭದಲ್ಲಿ, ಅಧಿಕಾರಿಗಳು ಬಾಬುಗೆ ಸೇರಿದ ಕಾರುಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಆದರೆ, ಬಾಬು ಮನೆಯ ಗೇಟ್ ತೆರೆಯದಿರುವುದರಿಂದ, ಕಳೆದ 15 ನಿಮಿಷಗಳಿಂದ ಆರ್ಟಿಓ ತಂಡವು ಮನೆಯ ಹೊರಗಡೆ ರಸ್ತೆಯಲ್ಲಿ ನಿಂತಿದೆ. ಗೇಟ್ ತೆರೆಯುವಂತೆ ಅಧಿಕಾರಿಗಳು ಸಿಬ್ಬಂದಿಗೆ ಸೂಚಿಸಿದ್ದರೂ ಕೂಡ ಬಾಗಿಲು ತೆರೆಯದೇ ಕೆಜಿಎಫ್ ಬಾಬು ಮೊಂಡಾಟ ಮಾಡಿದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಕೆಜಿಎಫ್ ಬಾಬು ಅವರ ಬಳಿ ರೋಲ್ಸ್ ರಾಯ್ಸ್, ವೆಲ್ಫೇರ್ ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ. ಈ ಪೈಕಿ ಒಂದು ರೋಲ್ಸ್ ರಾಯ್ಸ್ ಕಾರನ್ನು ಅವರು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಂದ 2019ರಲ್ಲಿ 6 ಕೋಟಿ ರೂಪಾಯಿಗೆ ಖರೀದಿಸಿದ್ದರು. ಆದರೆ, ಈ ಕಾರಿನ ನೋಂದಣಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿರಲಿಲ್ಲ ಎಂದು ಆರೋಪವಿದೆ. 2021ರ ಆಗಸ್ಟ್ನಲ್ಲಿ ಈ ಕಾರನ್ನು ಆರ್ಟಿಓ ಅಧಿಕಾರಿಗಳು ರಸ್ತೆ ತೆರಿಗೆ ಉಲ್ಲಂಘನೆಗಾಗಿ ವಶಪಡಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಆರ್ಟಿಓ ತಂಡವು ತೆರಿಗೆ ವಂಚನೆ ಆರೋಪದಡಿ ದಾಳಿ ನಡೆಸಿದೆ.
ಫೆಬ್ರವರಿ 2025ರಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ದೊಡ್ಡ ಕಾರ್ಯಾಚರಣೆಯಲ್ಲಿ, ಆರ್ಟಿಓ ತಂಡವು ಫೆರಾರಿ, ಪೋರ್ಷೆ, ಮಾಸೆರಾಟಿ, ರೇಂಜ್ ರೋವರ್, ಮತ್ತು ಬಿಎಂಡಬ್ಲ್ಯೂ ಸೇರಿದಂತೆ 30 ಐಷಾರಾಮಿ ಕಾರುಗಳನ್ನು ತೆರಿಗೆ ವಂಚನೆ ಆರೋಪದಡಿ ವಶಪಡಿಸಿಕೊಂಡಿತ್ತು. ಈ ಕಾರುಗಳು ದೆಹಲಿ, ಪುದುಚೇರಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮತ್ತು ಜಾರ್ಖಂಡ್ನಂತಹ ರಾಜ್ಯಗಳಲ್ಲಿ ನೋಂದಾಯಿಸಲ್ಪಟ್ಟಿದ್ದವು. ಈ ಕಾರ್ಯಾಚರಣೆಯಿಂದ ಸುಮಾರು 3 ಕೋಟಿ ರೂಪಾಯಿಗಳ ತೆರಿಗೆ ವಸೂಲಿಯಾಗಿತ್ತು.
ಕರ್ನಾಟಕದಲ್ಲಿ ರಸ್ತೆ ತೆರಿಗೆ ದೇಶದಲ್ಲೇ ಅತಿ ಹೆಚ್ಚು. ಈ ಜಿಕಾರಣದಿಂದ, ಕೆಲವರು ಕಡಿಮೆ ತೆರಿಗೆ ದರ ಹೊಂದಿರುವ ಇತರ ರಾಜ್ಯಗಳಲ್ಲಿ ಕಾರುಗಳನ್ನು ನೋಂದಾಯಿಸಿ, ಅದನ್ನು ಕರ್ನಾಟಕದಲ್ಲಿ ಬಳಸುತ್ತಾರೆ. ಇದು ಕಾನೂನುಬಾಹಿರವಾಗಿದ್ದು, ರಾಜ್ಯದ ಆರ್ಥಿಕತೆಗೆ ಹಾನಿಯುಂಟುಮಾಡುತ್ತದೆ ಎಂದು ಆರ್ಟಿಓ ಅಧಿಕಾರಿಗಳು ತಿಳಿಸಿದ್ದಾರೆ. ಕೆಜಿಎಫ್ ಬಾಬು ಅವರ ಕಾರುಗಳು ಇದೇ ರೀತಿಯ ತೆರಿಗೆ ವಂಚನೆ ಆರೋಪಕ್ಕೆ ಒಳಗಾಗಿವೆ.