ಗುಜರಾತ್ ATS ಕಾರ್ಯಾಚರಣೆ; ಬೆಂಗಳೂರಿನಲ್ಲಿ ಮಹಿಳೆ ಬಂಧನ

ಬೆಂಗಳೂರು:

   ಭಯೋತ್ಪಾದನಾ ಚಟುವಟಿಕೆ ಹಾಗೂ ಭಯೋತ್ಪಾದಕರಿಗೆ ಬೆಂಬಲ ನೀಡಿದ ಆರೋಪದಡಿ ನಗರದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಮಹಿಳೆಯನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ನಗರದಲ್ಲಿ ಬಂಧಿಸಿದ್ದಾರೆ

   ಜಾರ್ಖಂಡ್ ಮೂಲದ ಶಮಾ ಪರ್ವೀನ್ ಬಂಧಿತ ಮಹಿಳೆ. ಹೆಬ್ಬಾಳದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಹೋದರನ ಮನೆಯಲ್ಲಿ ಶಮಾ ಪರ್ವೀನ್ ನೆಲಸಿದ್ದಳು. ಆಕೆ ಎಲ್ಲಿಯೂ ಕೆಲಸಕ್ಕೆ ಹೋಗುತ್ತಿರಲಿಲ್ಲ.‌ ನಗರದ ಮನೋರಾಯನಪಾಳ್ಯ ಪ್ರದೇಶದಲ್ಲಿದ್ದ ಸಹೋದರನ ಮನೆಯಲ್ಲೇ ಕಾಲಕಳೆಯುತ್ತಿದ್ದಳು ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿ ಅಲ್ ಖೈದಾ ಜಾಲವನ್ನು ಬಲಪಡಿಸುವಲ್ಲಿ ಆಕೆಯ ಪಾತ್ರವಿದೆ ಎಂದು ATS ತನಿಖೆಯು ಬಹಿರಂಗಪಡಿಸಿದೆ.

   ಆರೋಪಿಯಿಂದ ಡಿಜಿಟಲ್ ಉಪಕರಣಗಳು, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಮಾ ಪರ್ವೀನ್ ಪದವೀಧರೆಯಾಗಿದ್ದು, ಅವರು ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದಳು.

   ಆಕೆ ಅಲ್ ಖೈದಾಗಾಗಿ ಕೆಲಸ ಮಾಡುತ್ತಿದ್ದರು. ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಗುಂಪಿನ ಸಿದ್ಧಾಂತವನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದಳು ಎಂದು ಆರೋಪಿಸಲಾಗಿದೆ. ಆಕೆ ಪ್ರಮುಖ ಅಲ್ ಖೈದಾ ಕಾರ್ಯಕರ್ತನ ವೀಡಿಯೊಗಳನ್ನು ಹಂಚಿಕೊಂಡಿದ್ದಳು. ಯುವಕರನ್ನು ಭಯೋತ್ಪಾದನೆಗೆ ಪ್ರೋತ್ಸಾಹಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. 

   ಗುಜರಾತ್ ಎಟಿಎಸ್ ಈ ಹಿಂದೆ ನಾಲ್ವರು ಅಲ್ ಖೈದಾ ಕಾರ್ಯಕರ್ತರಾದ ಮೊಹಮ್ಮದ್ ಫೈಕ್, ಎಂಡಿ ಫರ್ದೀನ್, ಸೈಫುಲ್ಲಾ ಖುರೇಷಿ ಮತ್ತು ಜೀಶನ್ ಅಲಿ ಎಂಬುರವನ್ನು ಬಂಧಿಸಿತ್ತು. ಆರೋಪಿಗಳ ತನಿಖೆಯ ಸಮಯದಲ್ಲಿ ಬಂಧಿತರು ಮತ್ತು ಶಮಾ ಪರ್ವೀನ್ ನಡುವಿನ ಸಂಪರ್ಕದ ಬಗ್ಗೆ ಪೊಲೀಸರು ತಿಳಿದುಕೊಂಡರು. ನಂತರ ಸಾಕ್ಷ್ಯಗಳ ಆಧಾರದ ಮೇಲೆ, ಎಟಿಎಸ್ ತಂಡವು ಕರ್ನಾಟಕ್ಕೆ ಬಂದು ಆಕೆಯನ್ನು ಬಂಧಿಸಿತು. ಬೆಂಗಳೂರಿನ ನ್ಯಾಯಾಲಯದ ನ್ಯಾಯಾಧೀಶರ ಎದುರು ಶಂಕಿತ ಮಹಿಳೆಯನ್ನು ಅಧಿಕಾರಿಗಳು ಹಾಜರು‌ಪಡಿಸಿದ್ದರು. ಬಳಿಕ ಪ್ರಕರಣ ವರ್ಗಾವಣೆ ಆದೇಶ ಪಡೆದುಕೊಂಡು ಶಂಕಿತೆಯನ್ನು ಗುಜರಾತ್‌ಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು‌ ತಿಳಿಸಿವೆ.

   ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದ ಹಾಗೂ ಉಗ್ರ ಚಟುವಟಿಕೆಗೆ ಪ್ರೇರೇಪಣೆ ನೀಡುತ್ತಿದ್ದ ಆರೋಪದಡಿ ಬಂಧಿಸಲಾಗಿದೆ‌.‌ ಸ್ಥಳೀಯವಾಗಿ ಯಾರಾದರೂ ಶಂಕಿತ ಮಹಿಳೆಯ ಜತೆಗೆ‌ ಗುರುತಿಸಿಕೊಂಡಿದ್ದರೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

Recent Articles

spot_img

Related Stories

Share via
Copy link