ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ’

ನವದೆಹಲಿ 

    ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ’ ಎಂಬ ಜಾಣನುಡಿಯನ್ನು ಯಾರಿಗಾದರೂ ಸರಿಯಾಗಿ ಅರ್ಥ ಮಾಡಿಸಬೇಕೆಂದರೆ, ಅಂಥವರಿಗೆ ಅಮೆರಿಕವನ್ನು ತೋರಿಸಬೇಕು. ಕಾರಣ, ಕಳೆದ ಕೆಲವು ದಶಕಗಳಿಂದ ಇಂಥದ್ದೇ ಕೆಲಸವನ್ನು ಮಾಡಿಕೊಂಡು ಬಂದಿರುವಂಥ ರಾಷ್ಟ್ರ ಅಮೆರಿಕ. ಅದರಲ್ಲೂ ನಿರ್ದಿಷ್ಟವಾಗಿ, ಅಖಂಡ ಭಾರತದ ವಿಭಜನೆಯಾಗಿ ಪಾಕಿಸ್ತಾನ ಹುಟ್ಟಿಕೊಂಡ ನಂತರ, ಉಭಯ ದೇಶಗಳ ನಡುವೆ ಕಾಲಾನುಕಾಲಕ್ಕೆ ತಲೆದೋರುವ ವೈಮನಸ್ಸು, ಭುಗಿಲೇಳುವ ಕದನಕ್ಕೆ ಪೆಟ್ರೋಲ್ ಸುರಿದು, ಆ ಬೆಂಕಿಯಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಮಾಡಿಕೊಂಡೇ ಬಂದಿದೆ ಅಮೆರಿಕ.

   ಮಾತ್ರವಲ್ಲ, ಭಾರತ ಮತ್ತು ರಷ್ಯಾದ ನಡುವೆ ಗಟ್ಟಿ ತಳಹದಿಯ ದ್ವಿಪಕ್ಷೀಯ ಬಾಂಧವ್ಯ ರೂಪು ಗೊಳ್ಳುತ್ತಲೇ ಬಂದಿರುವುದನ್ನು ಕೆಂಗಣ್ಣಿನಿಂದಲೇ ನೋಡಿಕೊಂಡು ಬರುತ್ತಿದ್ದ ಅಮೆರಿಕವು, ಭಾರತವನ್ನು ಧೈರ್ಯಗೆಡಿಸಬೇಕೆಂಬ ಉದ್ದೇಶದೊಂದಿಗೆ ಹಿಂದೆಲ್ಲಾ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡುತ್ತಿತ್ತು, ಯುದ್ಧೋಪಕರಣಗಳನ್ನು ಸರಬರಾಜು ಮಾಡುತ್ತಲೇ ಬಂದಿತ್ತು. 

   ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ತರುವಾಯದಲ್ಲೊಮ್ಮೆ ಭಾರತ ಮತ್ತು ಅಮೆರಿಕದ ಬಾಂಧವ್ಯ ಸುಧಾರಿಸಿತ್ತು ಕೂಡ. ಆದರೆ ಡೊನಾಲ್ಡ್ ಟ್ರಂಪ್ ಮಹಾಶಯರು ಎರಡನೇ ಅವಧಿಗೆ ಅಧ್ಯಕ್ಷ ಗಾದಿಗೆ ಏರಿದ ನಂತರ ಮೈಯೊಳಗೆ ‘ತೊಣಚಿ ಹೊಕ್ಕಂತೆ’ ಆಡುತ್ತಿದ್ದಾರೆ. ಒಂದಿಡೀ ವಿಶ್ವವೇ ಪಾಕ್-ಪ್ರೇರಿತ ಪಹಲ್ಗಾಮ್ ಹತ್ಯಾಕಾಂಡವನ್ನು ಖಂಡಿಸುತ್ತಿರುವ ಈ ಹೊತ್ತಲ್ಲಿ, ‘ಊರಿಗೇ ಒಂದು ದಾರಿಯಾದರೆ, ಎಡವಟ್ಟನದೇ ಮತ್ತೊಂದು ದಾರಿ’ ಎಂಬಂತೆ ಪಾಕಿಸ್ತಾನಕ್ಕೆ ‘ಧೃತರಾಷ್ಟ್ರ ಆಲಿಂಗನ’ ನೀಡಲು ಮುಂದಾಗಿದ್ದಾರೆ ಟ್ರಂಪ್.

   ಪಾಕಿಸ್ತಾನದಲ್ಲಿ ಬೃಹತ್ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಆ ದೇಶದೊಂದಿಗೆ ಪಾಲು ದಾರಿಕೆ ಒಡಂಬಡಿಕೆ ಮಾಡಿಕೊಳ್ಳುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಸಾಲದೆಂಬಂತೆ, ‘ಭಾರತ ಮತ್ತು ರಷ್ಯಾ ದೇಶಗಳು ಸದ್ಯದಲ್ಲೇ ನಿರ್ಜೀವ ಆರ್ಥಿಕತೆ ಸಾಕ್ಷಿಯಾಗಲಿವೆ’ ಎಂಬ ಬುರುಡೆ-ಭವಿಷ್ಯವನ್ನೂ ನುಡಿದು ಬಿಟ್ಟಿದ್ದಾರೆ!

   ಆದರೆ, ‘ರಾಷ್ಟ್ರೀಯ ಹಿತಾಸಕ್ತಿ’ಯ ರಕ್ಷಣೆಗೆ ಕಟಿಬದ್ಧರಾಗಿರುವ ಆಳುಗರು ಕೇಂದ್ರದಲ್ಲಿ ಇರುವ ತನಕವೂ ಭಾರತಕ್ಕೆ ಯಾವ ಅಪಾಯವೂ ಇಲ್ಲ ಎಂಬುದನ್ನು ಟ್ರಂಪ್ ಮರೆತಂತಿದೆ…

Recent Articles

spot_img

Related Stories

Share via
Copy link