ಬೆಂಗಳೂರು:
ಹೈಕೋರ್ಟ್ ತರಾಟೆ ಹಿನ್ನೆಲೆ ಸಾರಿಗೆ ನೌಕರರ ಮುಷ್ಕರ ಮುಂದೂಡಿಕೆಯಾಗಿದೆ. ಹೈಕೋರ್ಟ್ ಸೂಚನೆಯ ಮೇರೆಗೆ ಸಾರಿಗೆ ನೌಕರರ ಮುಷ್ಕರವನ್ನು ಮುಂದೂಡಿಕೆ ಮಾಡುತ್ತಿರುವುದಾಗಿ ಸಾರಿಗೆ ಸಂಘಟನೆಗಳ ಜಂಟಿ ಕ್ರಿಯಾಸಮಿತಿಯ ಅಧ್ಯಕ್ಷ ಅನಂತ ಸುಬ್ಬಾರಾವ್ ಘೋಷಿಸಿದ್ದಾರೆ. ಹೀಗಾಗಿ ಮಂಗಳವಾರ ಸಂಜೆ ಎಂದಿನಂತೆ ಸಾರಿಗೆ ಬಸ್‌ಗಳ ಸಂಚಾರ ಆರಂಭವಾಗಿದೆ.
ಜನರಿಗೆ ನಿಮ್ಮ ಮುಷ್ಕರದಿಂದ ಸಮಸ್ಯೆ ಆಗಬಾರದು. ಮುಷ್ಕರ ನಿಂತಿರುವ ಬಗ್ಗೆ ನಾಳೆ ಮಾ ಹಿತಿ ನೀಡಬೇಕು. ಇಲ್ಲವಾದರೆ ನ್ಯಾಯಾಂಗ ನಿಂದನೆ ಕೇಸ್ ದಾಖಲು ಮಾಡುವುದಾಗಿ ಹೈಕೋರ್ಟ್ ಸಿಜೆ ವಿಭು ಬಖ್ರು, ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ನ್ಯಾಯಪೀಠವು ಎಚ್ಚರಿಕೆ ನೀಡಿದೆ. ಹೀಗಾಗಿ ರಾಜ್ಯಾದ್ಯಂತ ಈ ಕ್ಷಣದಿಂದಲೇ ಹೈಕೋರ್ಟ್ ಸೂಚನೆಯ ಮೇರೆಗೆ ನಾವು ಸಾರಿಗೆ ನೌಕರರ ಮುಷ್ಕರವನ್ನು ಮುಂದೂಡಿಕೆ ಮಾಡಿದ್ದೇವೆ, ಮುಷ್ಕರ ಕೈಬಿಟ್ಟಿಲ್ಲ, ಮುಂದಿನ ದಿನಾಂಕ ಘೋಷಿಸುತ್ತೇವೆ ಎಂದು ಅನಂತ ಸುಬ್ಬಾರಾವ್ ತಿಳಿಸಿದ್ದಾರೆ.
ಇಂದು ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದಂತ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದೆ. ವಾದ ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಪೀಠವು, ನಾಲ್ಕು ಸಾರಿಗೆ ನಿಗಮಗಳ ನೌಕರರ ಸಂಘಕ್ಕೆ ನೋಟಿಸ್ ನೀಡಿದೆ. ಇದೇ ಸಂದರ್ಭದಲ್ಲಿ ಮುಷ್ಕರ ಮುಂದುವರಿಸಿದರೇ ಎಸ್ಮಾ ಅಡಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂಬುದಾಗಿಯೂ ಹೈಕೋರ್ಟ್ ತಿಳಿಸಿದೆ ಹೈಕೋರ್ಟ್ ತರಾಟೆಗೆ ಸಾರಿಗೆ ನೌಕರರ ಸಂಘಟನೆಯ ಜಂಟಿ ಕ್ರಿಯಾ ಸಮಿತಿ ಪರ ವಕೀಲರು ತಬ್ಬಿಬ್ಬಾದರು. ಹೀಗಾಗಿ ನಾಳೆ ಸಾರಿಗೆ ಮುಷ್ಕರ ನಡೆಸುವುದಿಲ್ಲವೆಂದು ನೌಕರರ ಸಂಘಟನೆ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದ್ದಾರೆ.
