ಅಥಣಿ : ಕರ್ತವ್ಯನಿರತ ಯೋಧ ಹೃದಯಾಘಾತದಿಂದ ಸಾವು

ಅಥಣಿ :

     ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಐಗಳಿ ಗ್ರಾಮದ ಕಿರಣರಾಜ ಕೇದಾರಿ ತೆಲಸಂಗ ಆಗ್ನಿವೀರ ಯೋಧ ಮಂಗಳವಾರ ಪಂಜಾಬ್ ನಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.ದೇಶ ಸೇವೆ ಮಾಡುವ ಕನಸು ಹೊತ್ತಿದ್ದ ಕಿರಣರಾಜ್ ಸೇನೆಗೆ ನೇಮಕಗೊಂಡು ಒಂದೇ ವರ್ಷದಲ್ಲಿ ಅಕಾಲಿಕ ನಿಧನ ಹೊಂದಿರುವುದು ಅವರ ಕುಟುಂಬಸ್ಥರಿಗೆ ಮತ್ತು ಇಡೀ ಗ್ರಾಮಸ್ಥರಿಗೆ ತೀವ್ರ ಅಘಾತ ಉಂಟು ಮಾಡಿದೆ.

    ಕಳೆದ ಒಂದು ವರ್ಷದ ಹಿಂದೆ ಭಾರತೀಯ ಸೇನೆಗೆ ಸೇರಿದ್ದ ಕಿರಣರಾಜ ತರಬೇತಿ ಮುಗಿಸಿಕೊಂಡು 6 ತಿಂಗಳ ಹಿಂದಷ್ಟೇ ರಜೆಯ ಮೇಲೆ ಗ್ರಾಮಕ್ಕೆ ಆಗಮಿಸಿ, ಮತ್ತೆ ಪಂಜಾಬ್ ರಾಜ್ಯದ ಪಟಿಯಾಲ್ ರೆಜಿಮೆಂಟ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದನು. ಮಂಗಳವಾರ ಮುಂಜಾನೆ ಪ್ರತಿನಿತ್ಯದಂತೆ ಸಹೋದ್ಯೋಗಿಗಳೊಂದಿಗೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ, ಈ ವೇಳೆ ಮೈದಾನದಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆಂದು ಸೇನಾ ಕಚೇರಿಯ ಮೂಲಗಳು ತಿಳಿಸಿವೆ. 

   ಅವರ ಅಕಾಲಿಕ ನಿಧನದ ಸುದ್ದಿ ಇಡೀ ಗ್ರಾಮಸ್ಥರಲ್ಲಿ ಶೋಕ ಉಂಟು ಮಾಡಿದೆ. ಮೃತ ಯೋಧ ನಿಗೆ ತಂದೆ, ತಾಯಿ, ಸಹೋದರಿ, ಸಹೋದರ ಸೇರಿದಂತೆ ಅಪಾರ ಬಂಧು ಬಳಗವಿದೆ.

 ಸೈನಿಕನ ಪಾರ್ಥಿವ ಶರೀರವು ಪಂಜಾಬನಿಂದ ಬುಧವಾರ ಸಂಜೆ ದೆಹಲಿ ವಿಮಾನ ನಿಲ್ದಾಣದ ಮೂಲಕ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಗುರುವಾರ ಮುಂಜಾನೆ ಆಗಮಿಸಲಿದೆ.

  ಬೆಳಗಾವಿಯಿಂದ ಭಾರತೀಯ ಸೇನೆಯ ವಾಹನದಲ್ಲಿ ಐಗಳಿ ಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸಿದ ನಂತರ ಅಂತಿಮ ದರ್ಶನ ಹಾಗೂ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ಜರಗಲಿದೆ. ದೇಶಕ್ಕಾಗಿ ಸೇವಿ ಸಲ್ಲಿಸುವ ವೇಳೆ ನಿಧನ ಹೊಂದಿದ ಯೋಧನಿಗೆ ಗೌರವ ಸಲ್ಲಿಸಲು ಗ್ರಾಮಸ್ಥರು ಸಿದ್ಧತೆ ನಡೆಸಿದ್ದಾರೆ.

Recent Articles

spot_img

Related Stories

Share via
Copy link