ನವದೆಹಲಿ:
ಈ ವರ್ಷದ ಆರಂಭದಲ್ಲಿ ನ್ಯಾಯಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಪತ್ತೆಯಾಗಿದ್ದ ಭಾರಿ ಪ್ರಮಾಣದ ನಗದು ಸುದ್ದಿ ಮಾಡಿತ್ತು. ಬಳಿಕ ವರ್ಮಾ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು. ನಂತರ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಶಿಫಾರಸು ಮಾಡಿದ ಆಂತರಿಕ ತನಿಖಾ ವರದಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಇದೀಗ ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ವಿಚಾರಣೆಗೆ ಕಾನೂನುಬದ್ಧ ಅನುಮತಿ ಇದೆ ಮತ್ತು ಅದು ವರ್ಮಾ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಲೆಕ್ಕಕ್ಕೆ ಸಿಗದ ನಗದು ಪ್ರಕರಣದಲ್ಲಿ ತಮ್ಮ ವಿರುದ್ಧ ದೋಷಾರೋಪಣೆ ಮಾಡುವಂತೆ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮಾಡಿದ ಶಿಫಾರಸನ್ನು ವರ್ಮಾ ಪ್ರಶ್ನಿಸಿದ್ದರು. ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎಜಿ ಮಸಿಹ್ ಅವರ ಪೀಠವು ಜುಲೈ 30 ರಂದು ಅವರ ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು. ಸಿಜೆಐ ಮತ್ತು ಆಂತರಿಕ ಸಮಿತಿಯು ಫೋಟೋಗಳು ಮತ್ತು ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದನ್ನು ಹೊರತುಪಡಿಸಿ ಬೇರೆ ಪ್ರಕ್ರಿಯೆಗಳನ್ನು ನಡೆಸಿತ್ತು. ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಸಿಜೆಐ ಪತ್ರ ಕಳುಹಿಸುವುದು ಅಸಾಂವಿಧಾನಿಕವಲ್ಲ ಎಂದು ನಾವು ತೀರ್ಮಾನಿಸಿದ್ದೇವೆ. ಭವಿಷ್ಯದಲ್ಲಿ ಅಗತ್ಯವಿದ್ದರೆ ವಿಚಾರಣೆಯನ್ನು ನಡೆಸಲು ಅನುಮತಿ ಇದೆ ಎಂದು ಕೋರ್ಟ್ ಹೇಳಿದೆ. ಆದಾಗ್ಯೂ, ಆರೋಪಗಳಿಗೆ ಸಂಬಂಧಿಸಿದಂತೆ ಎಫ್ಐಆರ್ ಕೋರಿ ವಕೀಲರು ಸಲ್ಲಿಸಿದ ಪ್ರತ್ಯೇಕ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು, ಕ್ರಿಮಿನಲ್ ತನಿಖೆಗೆ ಯಾವುದೇ ಆಧಾರವಿಲ್ಲ ಎಂದು ಹೇಳಿದೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಕಂತೆ ಕಂತೆ ಲೆಕ್ಕಕ್ಕೆ ಸಿಗದ ನೋಟುಗಳು ಪತ್ತೆಯಾಗಿದ್ದವು. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅದರಲ್ಲಿ ವರ್ಮಾ ನಿವಾಸದಲ್ಲಿ ಬೆಂಕಿಯಲ್ಲಿ ಸುಟ್ಟು ಹೋಗಿರುವ ಕಂತೆ ಕಂತೆ ನೋಟುಗಳು ಕಾಣಿಸುತ್ತದೆ. ವರ್ಮಾ ಊರಿನಿಂದ ಹೊರಗಿದ್ದಾಗ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಅವರ ಕುಟುಂಬದ ಸದಸ್ಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅವರು ಬೆಂಕಿಯನ್ನು ನಂದಿಸಿದ ನಂತರ ರೂಂಗಳಲ್ಲಿ ನಗದು ಪತ್ತೆಯಾಗಿತ್ತು.







