ವಾಷಿಂಗ್ಟನ್:
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಮತ್ತು ಅದರ ಅಲಿಯಾಸ್ ಮಜೀದ್ ಬ್ರಿಗೇಡ್ ಅನ್ನು ಸೋಮವಾರ ಅಧಿಕೃತವಾಗಿ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲಾಗಿದೆ. 2019 ರಿಂದ, ಮಜೀದ್ ಬ್ರಿಗೇಡ್ ಸೇರಿದಂತೆ ಹೆಚ್ಚುವರಿ ದಾಳಿಗಳಿಗೆ ಬಿಎಲ್ಎ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ” ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಪತ್ರಿಕಾ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ. ಪಾಕಿಸ್ತಾನದಲ್ಲಿ ಹಲವಾರು ಮಾರಕ ದಾಳಿಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಬಿಎಲ್ಎ ಸಂಘಟನೆಯ ಕುರಿತು ಅಮೆರಿಕ ಹಲವು ವರ್ಷಗಳಿಂದ ನಿಗಾ ವಹಿಸಿದೆ. ಸರಣಿ ಭಯೋತ್ಪಾದಕ ಘಟನೆಗಳೊಂದಿಗೆ ಸಂಬಂಧ ಹೊಂದಿರುವ ನಂತರ ಇದನ್ನು ಮೊದಲು 2019 ರಲ್ಲಿ ಎಸ್ಡಿಜಿಟಿ ಎಂದು ಗೊತ್ತುಪಡಿಸಲಾಯಿತು. ಅಂದಿನಿಂದ, ಮಜೀದ್ ಬ್ರಿಗೇಡ್ ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಗಳು ಮತ್ತು ಉನ್ನತ ಮಟ್ಟದ ದಾಳಿಗಳು ಸೇರಿದಂತೆ ಅನೇಕ ದಾಳಿಗಳ ಜವಾಬ್ದಾರಿಯನ್ನು ಈ ಗುಂಪು ವಹಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ತಿಳಸಲಾಗಿದೆ.
ವಿದೇಶಾಂಗ ಇಲಾಖೆಯ ಪ್ರಕಾರ, 2024 ರಲ್ಲಿ ಕರಾಚಿ ವಿಮಾನ ನಿಲ್ದಾಣ ಮತ್ತು ಗ್ವಾದರ್ ಬಂದರು ಪ್ರಾಧಿಕಾರ ಸಂಕೀರ್ಣದ ಬಳಿ ನಡೆದ ಆತ್ಮಹತ್ಯಾ ದಾಳಿಯ ಹೊಣೆಯನ್ನು ಬಿಎಲ್ಎ ಹೊತ್ತುಕೊಂಡಿದೆ. ಮಾರ್ಚ್ 2025 ರಲ್ಲಿ, ಕ್ವೆಟ್ಟಾದಿಂದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದ ಜಾಫರ್ ಎಕ್ಸ್ಪ್ರೆಸ್ ರೈಲನ್ನು ಅಪಹರಿಸಿದ್ದಾಗಿ ಗುಂಪು ಒಪ್ಪಿಕೊಂಡಿತು – ಈ ಘಟನೆಯಲ್ಲಿ 31 ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದರು. ದಾಳಿಯ ಸಮಯದಲ್ಲಿ 300 ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಲಾಗಿತ್ತು. ಈ ಹಿಂಸಾತ್ಮಕ ಕ್ರಮಗಳು ನಾಗರಿಕರ ಭದ್ರತೆಗೆ ಬೆದರಿಕೆ ಹಾಕುತ್ತಲೇ ಇವೆ. ಇದರಿಂದಾಗಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲಾಗಿದೆ.
ಅಮೆರಿಕ ಮತ್ತು ಪಾಕಿಸ್ತಾನದಿಂದ ಭಯೋತ್ಪಾದಕ ಗುಂಪು ಎಂದು ಹೆಸರಿಸಲ್ಪಟ್ಟ ಬಿಎಲ್ಎ, ತನ್ನ ಖನಿಜ-ಸಮೃದ್ಧ ಪ್ರಾಂತ್ಯಕ್ಕೆ ಸ್ವಾತಂತ್ರ್ಯವನ್ನು ನೀಡುವಂತೆ ಒತ್ತಾಯಿಸಿ ಪಾಕಿಸ್ತಾನ ಸರ್ಕಾರದ ವಿರುದ್ಧ ದಶಕಗಳಿಂದ ದಂಗೆಯನ್ನು ನಡೆಸಿದೆ. ಇದಕ್ಕೂ ಮೊದಲು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಜನರನ್ನು ಬಲಿತೆಗೆದುಕೊಂಡ ಭೀಕರ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಗುಂಪಿನ ಒಂದು ಭಾಗವಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಅನ್ನು ಅಮೆರಿಕ ಅಧಿಕೃತವಾಗಿ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿತ್ತು.








