ವಿಧಾನಸಭೆ

    ಧರ್ಮಸ್ಥಳ ಗ್ರಾಮದ ವಿಚಾರದಲ್ಲಿ ದೂರು ನೀಡಿರುವ ವ್ಯಕ್ತಿ ಹೇಳಿದ್ದು ಸುಳ್ಳು ಎಂದಾದರೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.ಧರ್ಮಸ್ಥಳ ಗ್ರಾಮದಲ್ಲಿ ಅಪರಿಚಿತ ಶವಗಳ ಹುಡುಕಾಟದ ಎಸ್‌ಐಟಿ ತನಿಖೆ ಕುರಿತು ಬಿಜೆಪಿ ಶಾಸಕರ ಆರೋಪಗಳಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ಧರ್ಮಸ್ಥಳದ ಮಂಜುನಾಥ ದೇವಸ್ಥಾನದ ಆಡಳಿತ ಮಂಡಳಿ ಮೇಲೆ ಪದೇ ಪದೆ ಕೇಳಿಬರುತ್ತಿರುವ ಆಪಾದನೆಗಳ ಸತ್ಯಾಸತ್ಯತೆ ಹೊರತರಲು ಎಸ್ಐಟಿ ತನಿಖೆ ನಡೆಸಲಾಗುತ್ತಿದೆಯೇ ಹೊರತು ಇದರ ಹಿಂದೆ ಸರ್ಕಾರಕ್ಕೆ ಬೇರೆ ಯಾವುದೇ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಧರ್ಮಸ್ಥಳ ಗ್ರಾಮದಲ್ಲಿ ಅಪರಿಚಿತ ಶವ ಹುಡುಕಾಟ ಪ್ರಕರಣ ಯಾವುದೇ ರಾಜಕೀಯ ತಿರುವು, ಧಾರ್ಮಿಕ ತಿರುವು ತೆಗೆದುಕೊಳ್ಳಬಾರದು. ನಾವು ಯಾವುದೋ ಒತ್ತಡಕ್ಕೆ ಮಣಿದು ಎಸ್‌ಐಟಿ ರಚಿಸಿಲ್ಲ, ಯಾರ ಒತ್ತಡಕ್ಕೆ ಮಣಿಯುವುದೂ ಇಲ್ಲ. ಧರ್ಮಸ್ಥಳ ದೇವಸ್ಥಾನ ಆಡಳಿತ ಮಂಡಳಿ ಮೇಲೆ ಪದೇ ಪದೆ ಎದುರಾಗುತ್ತಿದ್ದ ಆರೋಪಗಳ ಸತ್ಯಾಸತ್ಯತೆ ಅರಿಯಲು, ಇನ್ನು ಮುಂದೆ ಆರೋಪಗಳು ಬಾರದಂತೆ ನೋಡಿಕೊಳ್ಳಲು ಎಸ್‌ಐಟಿ ತನಿಖೆ ಮಾಡಲಾಗುತ್ತಿದೆ ಎಂದರು.ಅನಾಮಿಕ ದೂರುದಾರ ಹೇಳಿದ್ದೆಲ್ಲವನ್ನೂ ಎಸ್‌ಐಟಿ ಕೇಳುತ್ತಿಲ್ಲ. ಸತ್ಯಾಸತ್ಯತೆ ಪರಿಶೀಲಿಸಿ ಮುಂದುವರೆಯುತ್ತಿದೆ. ಇನ್ನು, ಅನಾಮಿಕ ಹೇಳಿರುವುದು ಸುಳ್ಳು ಎಂದು ಸಾಬೀತಾದರೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗುತ್ತದೆ. ಜತೆಗೆ, ಕುತಂತ್ರ ನಡೆದಿದ್ದರೂ ಅದರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಸರ್ಕಾರ ಸತ್ಯಶೋಧನೆಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೂ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ಸರ್ಕಾರ ಏನು ತಪ್ಪು ಮಾಡಿದೆ ಎಂಬುದು ತಿಳಿಯುತ್ತಿಲ್ಲ. ಹಾಗೆಯೇ, ಎಸ್‌ಐಟಿ ಮೇಲೆ ನಾವ್ಯಾರು ಒತ್ತಡ ಹಾಕುತ್ತಿಲ್ಲ. ಈವರೆಗೆ ಎಸ್‌ಐಟಿ ಅಧಿಕಾರಿಗಳಿಗೆ ನಮ್ಮಿಂದ ಒಂದೇ ಒಂದು ದೂರವಾಣಿ ಕರೆಯನ್ನೂ ಮಾಡಿಲ್ಲ. ಜತೆಗೆ, ಆ ವಿಚಾರವಾಗಿ ನಾವ್ಯಾರು ಮಾತನಾಡುತ್ತಿಲ್ಲ ಎಂದು ಸಚಿವರು ತಿಳಿಸಿದರು.

    ಧರ್ಮಸ್ಥಳದ ಮಂಜುನಾಥ ದೇವಸ್ಥಾನದ ಆಡಳಿತ ಮಂಡಳಿ ಮೇಲೆ ಪದೇ ಪದೆ ಕೇಳಿಬರುತ್ತಿರುವ ಆಪಾದನೆಗಳ ಸತ್ಯಾಸತ್ಯತೆ ಹೊರತರಲು ಎಸ್ಐಟಿ ತನಿಖೆ ನಡೆಸಲಾಗುತ್ತಿದೆಯೇ ಹೊರತು ಇದರ ಹಿಂದೆ ಸರ್ಕಾರಕ್ಕೆ ಬೇರೆ ಯಾವುದೇ ಉದ್ದೇಶ ಇಲ್ಲ. ಎಸ್‌ಐಟಿ ಮೇಲೆ ನಾವ್ಯಾರು ಒತ್ತಡ ಹಾಕುತ್ತಿಲ್ಲ. ಈವರೆಗೆ ಎಸ್‌ಐಟಿ ಅಧಿಕಾರಿಗಳಿಗೆ ನಮ್ಮಿಂದ ಒಂದೇ ಒಂದು ದೂರವಾಣಿ ಕರೆಯನ್ನೂ ಮಾಡಿಲ್ಲ. ಜತೆಗೆ, ಆ ವಿಚಾರವಾಗಿ ನಾವ್ಯಾರು ಮಾತನಾಡುತ್ತಿಲ್ಲ.