ಜನಗಾಂವ್:
ತೆಲಂಗಾಣದ ಜನಗಾಂವ್ ಪಟ್ಟಣದಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ 10 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆ ಬಗ್ಗೆ ಸಹಾಯಕ ಪೊಲೀಸ್ ಅಧೀಕ್ಷಕ (ASP) ಪಾಂಡರಿ ಚೇತನ್ ನಿತಿನ್ ತಿಳಿಸಿದ್ದು, ಕೃತ್ಯದಲ್ಲಿ ಬಾಗಿಯಾದವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಾದ ಮೊಹಮ್ಮದ್ ಒವೈಸಿ, ಮುತ್ಯಾಲ ಪವನ್ ಕುಮಾರ್, ಬೌದ್ಧುಲ ಶಿವ ಕುಮಾರ್, ನೂಕಲ ರವಿ, ಜೆಟ್ಟಿ ಸಂಜಯ್, ಮೊಹಮ್ಮದ್ ಅಬ್ದುಲ್ ಖಯೂಮ್, ಪುಸ್ತಕಾಲ ಸಾಯಿ ತೇಜ, ಮುಟ್ಟಾಡಿ ಸುಮಂತ್ ರೆಡ್ಡಿ, ಗುಂಡ ಸಾಯಿ ಚರಣ್ ರೆಡ್ಡಿ ಮತ್ತು ಒರುಗಂಟಿ ಸಾಯಿ ರಾಮ್ ಎಲ್ಲರೂ ಜನಗಾಂವ್ ಪಟ್ಟಣದ ನಿವಾಸಿಗಳಾಗಿದ್ದಾರೆ.
ಪೊಲೀಸರ ಪ್ರಕಾರ, ಜೂನ್ ತಿಂಗಳಲ್ಲಿ ಆರೋಪಿಗಳು ಯುವತಿಯನ್ನು ಪ್ರೀತಿ ಮತ್ತು ಸ್ನೇಹದ ನೆಪದಲ್ಲಿ ಆಮಿಷವೊಡ್ಡಿ, ಜನಗಾಂವ್–ಸೂರ್ಯಪೇಟೆ ರಸ್ತೆಯಲ್ಲಿರುವ “ಟೀ ವರ್ಲ್ಡ್” ಹಿಂಭಾಗದ ಕೊಠಡಿಗೆ ಕಾರಿನಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಒಬ್ಬ ಆರೋಪಿಯು ಯುವತಿಯನ್ನು ಪ್ರೀತಿಯ ನಾಟಕವಾಡಿ ಗೋವಾಕ್ಕೆ ಕರೆದೊಯ್ದು, ಅಲ್ಲಿ ಹಲವುಬಾರಿ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಯುವತಿಯ ಚಿಕ್ಕಮ್ಮನ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದರು. ಮಂಗಳವಾರ, ಆರೋಪಿಗಳು ಸಿದ್ದಿಪೇಟೆ ರಸ್ತೆಯಲ್ಲಿರುವ ಮಾಹಿತಿ ಆಧರಿಸಿ ಬಂಧಿಸಿದರು. ವಿಚಾರಣೆಯ ವೇಳೆ ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ASP ಚೇತನ್ ನಿತಿನ್ ದೃಢಪಡಿಸಿದ್ದಾರೆ. ತನಿಖೆಯು ಮುಂದುವರಿದಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.








