ಹಾಸನ
ಹಾಸನ ಜಿಲ್ಲೆಯ ಶಿರಾಡಿಘಾಟ್ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಕಡೆ ಗುಡ್ಡ ಕುಸಿಯುತ್ತಿದೆ. ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದ ಗುಡ್ಡ ಕುಸಿಯುತ್ತಿದೆ ಎಂದು ಹೇಳಲಾಗುತ್ತಿದೆ. ಸಕಲೇಶಪುರ ತಾಲೂಕಿನ ಕಪ್ಪಳ್ಳಿ ಬಳಿ ರಸ್ತೆಗೆ ಅಪಾರ ಪ್ರಮಾಣದ ಮಣ್ಣು ಮತ್ತು ಬೃಹತ್ ಬಂಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇನ್ನು, ಭಾರಿ ಮಳೆಯಿಂದ ಶಿರಾಡಿಘಾಟ್ ಭಾಗದ ಕಾಫಿ ಬೆಳೆಗಾರರು ಸಂಕಷ್ಟ ಕ್ಕೆಸಿಲುಕಿದ್ದಾರೆ. ಚತುಷ್ಪತ ರಸ್ತೆ ನಿರ್ಮಾಣಕ್ಕಾಗಿ ಕಡಿದಾಗಿ ಮಣ್ಣು ತೆಗೆದು ರಸ್ತೆ ನಿರ್ಮಿಸಿದ್ದರಿಂದ ಭೂಮಿ ಕೊಚ್ಚಿಹೋಗಿ ಕಾಫಿ ಬೆಳೆಗಾರರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಪ್ರತಿಬಾರಿ ಮಳೆ ಹೆಚ್ಚಾದಾಗ ಕಾಫಿ ಗಿಡಗಳು ನಾಶವಾಗಿವೆ. ಕಾಫಿ ಗಿಡಗಳ ಜೊತೆಗೆ ಸಿಲ್ವರ್ ಮರಗಳು ಕೂಡ ಕುಸಿಯುತ್ತಿವೆ. ಸಕಲೇಶಪುರ ತಾಲೂಕಿನ ಕಪ್ಪಳ್ಳಿಯಿಂದ ಹೆಗ್ಗದ್ದೆವರೆಗೆ ಹಲವು ಕಡೆ ಕಾಫಿತೋಟ ಕುಸಿದಿದೆ. ಹತ್ತಾರು ಕಡೆ ಕಾಫಿ ತೋಟಗಳು ಕುಸಿದಿವೆ. ಒಂದೆಡೆ ರಸ್ತೆಗೆ ಮಣ್ಣು ಕುಸಿದು ಸಂಚಾರಕ್ಕೆ ತೊಂದರೆಯಾಗುತ್ತಿದ್ದರೇ, ಇನ್ನೊಂದು ಕಡೆ ಕಾಫಿ ತೋಟ ನಾಶವಾಗಿ ಬೆಳೆಗಾರರ ಪರದಾಡುವಂತಾಗಿದೆ.
ಸಕಲೇಶಪುರ ತಾಲೂಕಿನ ಹೊಸೂರು, ಗೊದ್ದು ಗ್ರಾಮದಲ್ಲಿ ಭಾರಿ ಮಳೆಗೆ ಮನೆಯ ಗೋಡೆ, ಮೇಲ್ಚಾವಣಿ ಕುಸಿದು ಬಿದ್ದಿದೆ. ಹೊಸೂರಿನ ಗಂಗಮ್ಮ, ಗೊದ್ದು ಗ್ರಾಮದ ಸಣ್ಣಪ್ಪಗೌಡಗೆ ಸೇರಿದ ಮನೆ ಮೇಲ್ಚಾವಣಿ ಕುಸಿದಿದ್ದು, ಹೆಚ್. ಎನ್.ಸಣ್ಣಪ್ಪಗೌಡ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮನೆ ಹಾನಿ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು.








