ಬೆಂಗಳೂರು:
ವಿಧಾನಸಭೆ ಕಲಾಪದಲ್ಲಿ ಪಾಕಿಸ್ತಾನದ ವಿಚಾರ ಅನಪೇಕ್ಷಿತವಾಗಿ ಪ್ರಸ್ತಾಪವಾಗಿ ಕೆಲ ಕಾಲ ನಗೆಯ ಕಡಲು ಎಬ್ಬಿಸಿದ ಘಟನೆ ನಡೆಯಿತು. ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯ ಭರತ್ ಶೆಟ್ಟಿ ಮಾತನಾಡುತ್ತಿದ್ದಾಗ ಇದು ನಡೆದಿದೆ. ‘ಧರ್ಮಸ್ಥಳದ ವಿಚಾರ ಪಾಕಿಸ್ತಾನದ ಟಿವಿಗಳಲ್ಲೂ ಪ್ರಸಾರ ಆಗಿದೆ’ ಎಂದು ಬಿಜೆಪಿಯ ಭರತ್ ಶೆಟ್ಟಿ ಹೇಳಿದಾಗ ವಸತಿ ಸಚಿವ ಜಮೀರ್ ಅಹಮದ್ ಖಾನ್ ರೋಷಾವೇಶದಿಂದ ಎದ್ದು ನಿಂತು ‘ಪಾಕಿಸ್ತಾನದ ಹೆಸರು ಹೇಳಬೇಡಿ, ಪಾಕಿಸ್ತಾನ ಅಂದ್ರೆ ನನಗೆ ಆಗಕ್ಕಿಲ್ಲ’ ಎಂದು ಕಿಡಿಕಾರಿದರು.
‘ನನಗೆ ಪಾಕಿಸ್ತಾನದ ಹೆಸರು ಕೇಳಿದ್ರೆ ಆಗಲ್ಲ. ಅದು ನಮ್ಮ ಶತ್ರುದೇಶ. ಪಾಕಿಗಳಿಗೆ ಗುಂಡು ಹೊಡೀತಿನಿ. ಶತ್ರು ದೇಶದ ಹೆಸರು ಏಕೆ ಎತ್ತುತ್ತೀರಿ’ ಎಂದು ಜಮೀರ್ ಮತ್ತೆ ಆವೇಶ ಭರಿತರಾದರು. ‘ಪಾಕಿಸ್ತಾನ ಎಂದರೆ ಏಕೆ ಪದೇ ಪದೆ ಎದ್ದು ನಿಲ್ಲುತ್ತೀರಿ. ನಿಮ್ಮವರೇ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಹಾಕಿದ್ದರಲ್ಲ’ ಎಂದು ಬಿಜೆಪಿ ಸದಸ್ಯರು ಕಾಲೆಳೆದರು.
ಆಗ ಮಧ್ಯ ಪ್ರವೇಶ ಮಾಡಿದ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ‘ಇಲ್ಲಿ ಎಲ್ಲರ ಸಮಸ್ಯೆ ಎಂದರೆ, ಕಿವಿಗೆ ಹೆಡ್ ಪೋನ್ ಸರಿಯಾಗಿ ಹಾಕಿಕೊಂಡು ಕೇಳಿಸಿಕೊಳ್ಳುವುದಿಲ್ಲ. ಭರತ್ ಶೆಟ್ಟಿ ಏನೋ ಹೇಳಿದರೆ, ಜಮೀರ್ಗೆ ಇನ್ನೇನೋ ಕೇಳಿಸಿದೆ. ಜಮೀರ್ ಅವರಿಗೆ ಪಾಕಿಸ್ತಾನದ ಹೆಸರು ಕೇಳಿದರೆ ಕೋಪ ಬರುತ್ತದೆಯಂತೆ. ಪಾಕಿಸ್ತಾನದ ಮೇಲೆ ಯುದ್ಧ ನಡೆದರೆ ತಮ್ಮ ದೇಹಕ್ಕೆ ಬಾಂಬ್ ಕಟ್ಟಿಕೊಂಡು ಹೋಗುತ್ತೇನೆ ಎಂದು ಈ ಹಿಂದೆಯೇ ಹೇಳಿದ್ದರು’ ಎಂದು ಕಾಲೆಳೆದರು. `ಛೇ ಅವರು ಬಾಂಬ್ ಕಟ್ಟಿಕೊಂಡು ಹೋಗೋದು ಬೇಡ, ಅವರು ನಮ್ಮವರೇ ಇಲ್ಲೇ ಇರಲಿ” ಎಂದು ಬಿಜೆಪಿಯ ಸತೀಶ್ ರೆಡ್ಡಿ ಹೇಳಿದರು.








