ಮಾತು – ಪ್ರಾಣ – ಮನಸ್ಸುಗಳಿಗೆ ಸಂಸ್ಕಾರದಿಂದ ಅಭ್ಯುದಯ : ಸ್ವರ್ಣವಲ್ಲೀ

ಶಿರಸಿ:

    ಜಪ, ಪೂಜೆ, ಅರ್ಚನೆಗಳಿಂದ ನಮ್ಮ ಒಳಗಿನ ಮೂರು ಕರಣಗಳಿಗೆ ಸಂಸ್ಕಾರಗಳು ಆಗುತ್ತವೆ. ತ್ರಿಕರಣಗಳು ಮಾತು, ಪ್ರಾಣ ಮತ್ತು ಮನಸ್ಸು ಈ ಮೂರು ಕರಣಗಳಿಗೆ ಸಂಸ್ಕಾರಗಳು ಅತ್ಯಂತ ಅವಶ್ಯಕ ಮತ್ತು ಅಷ್ಟೇ ಮಹತ್ವವೂ ಆಗಿದೆ. ಇವುಗಳಿಗೆ ಸಂಸ್ಕಾರವನ್ನು ನೀಡುವ ಪ್ರಯತ್ನ ಆಗಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಠದ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿ ನುಡಿದರು.
ಅವರು ಶ್ರೀಮಠದಲ್ಲಿ ಸಂಕಲ್ಪಿತ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಶಾಂತಪುರ ಸೀಮೆಯ ಶಿಷ್ಯರಿಂದ ಸೇವೆ‌ ಸ್ವೀಕರಿಸಿ ಆಶೀರ್ವಚನ ನುಡಿದರು.

   ನಾವು ಎಷ್ಟೇ ಜನ್ಮ ಎತ್ತಿದರೂ ಮಾತು, ಮನಸ್ಸು ಮತ್ತು ಪ್ರಾಣ ಈ ಮೂರು ಕರಣಗಳು ನಮ್ಮ ಜೊತೆಯಲ್ಲಿಯೇ ಇರುತ್ತವೆ. ಮುಂದೆ ಎಷ್ಟು ಜನ್ಮ ತಾಳಿದರು ನಮ್ಮ ಜೊತೆಯಲ್ಲಿಯೇ ಇರುತ್ತವೆ. ಹೊರಗಿನ ಇಂದ್ರಿಯಗಳು ಮಾತ್ರ ಬೇರೆ ಆಗುತ್ತವೆ. ಆದರೆ ಒಳಗಿನ ಈ ಕರಣಗಳು ಮಾತ್ರ ನಮ್ಮನ್ನು ಬಿಡುವುದಿಲ್ಲ. ನಾವು ಮೋಕ್ಷ ಎಂಬ ಪರಮ ಪುರುಷಾರ್ಥವನ್ನು ಹೊಂದುವ ವರೆಗೂ ನಮ್ಮ ಜೊತೆಯಲ್ಲಿ ಇರುತ್ತವೆ. ಸ್ವರ್ಗ, ನರಕಾದಿ ಬೇರೆ ಬೇರೆ ಲೋಕಗಳಿಗೆ ಹೋದರೂ ಈ ಮೂರು ಮಾತ್ರ ನಮ್ಮ ಬಳಿಯೇ ಬರುತ್ತವೆ. ಜೊತೆಯಲ್ಲಿ ಪುಣ್ಯ ಪಾಪಗಳು ಸೇರಿಕೊಳ್ಳುತ್ತವೆ ಎಂದರು.

   ಹಾಗಾಗಿ ಈ ಮೂರಕ್ಕೆ ಬಹಳ ಮಹತ್ವ. ಈ ಮೂರು ನಮಗೆ ಹಿಂದೆ ಅನೇಕ ಜನ್ಮಗಳಲ್ಲಿ ಇದ್ದಿದ್ದರೂ, ಮನುಷ್ಯ ಜನ್ಮದಲ್ಲಿ ತುಂಬ ವಿಶೇಷವಾಗಿ ಇರುತ್ತದೆ. ಮನುಷ್ಯನ ಮಾತು, ಪ್ರಾಣ, ಮನಸ್ಸು ಉಳಿದ ಪ್ರಾಣಿಗಳ ಮಾತು,ಪ್ರಾಣ, ಮನಸ್ಸುಗಳಿಗಿಂತ ತುಂಬ ವಿಭಿನ್ನ.
ಎಲ್ಲಾ ಪ್ರಾಣಿಗಳಿಗೂ ಅವರದ್ದೇ ಆದ ಭಾಷೆ ಇದೆ. ಅವೂ ಪರಸ್ಪರ ಮಾತನಾಡಿಕೊಳ್ಳುತ್ತವೆ. ಆದರೆ ಮನುಷ್ಯನ ಮಾತಿನಂತೆ ಇಸ್ಟೊಂದು ಪರಿಷ್ಕಾರಗಳು ಇಲ್ಲ. ನಮ್ಮ ಮನಸ್ಸನ್ನು ದೇವರ ಚಿಂತನೆಯಲ್ಲಿ ತೊಡಗಿಸುವ, ಏಕಾಗ್ರತೆಯನ್ನು ಕೊಡುವ ಮಾತುಗಳನ್ನು ಆಡಬಹುದು. ಭಗವದ್ಗೀತೆ ಎಂಬ ಮಾತು ಮನುಷ್ಯನಿಗೆ ಇದೆ. ಉಳಿದ ಪ್ರಾಣಿಗಳಿಗೆ ಇದು ಇಲ್ಲ. ಮನುಷ್ಯ ಇದರಿಂದ ಶ್ರೇಷ್ಠ ಚಿಂತನೆಯಲ್ಲಿ ತೊಡಗಬಲ್ಲ. ಆದ್ದರಿಂದ ಪ್ರಾಣಿಗಳ ಮಾತಿಗೂ ಮನುಷ್ಯರ ಮಾತಿಗೂ ಬಹಳ ಅಂತರ ಇದೆ ಎಂದರು.

   ಪ್ರಾಣ. ಪ್ರಾಣಾಯಾಮದ ಮೂಲಕ ಈ ಪ್ರಾಣವಾಯುವನ್ನು ನಿಯಂತ್ರಿಸುವ ಸಾಮರ್ಥ್ಯ ಮನುಷ್ಯನಿಗೆ ಇದೆ. ಮನುಷ್ಯರ ಉಸಿರಾಟದಲ್ಲಿ ಪ್ರಾಣಾಯಾಮ ಮಾಡಬಹುದು. ಆದರೆ ಪ್ರಾಣಿಗಳಿಗೆ ಈ ಪ್ರಾಣಾಯಾಮ ಇಲ್ಲ. ಅವುಗಳು ಸಹಜವಾಗಿ ಉಸಿರಾಡುತ್ತವೆ. ಆದರೆ ಈ ನಿಯಂತ್ರಣ ಅವುಗಳಿಗೆ ತಿಳಿದಿಲ್ಲ. ಮನುಷ್ಯನು ಉಸಿರಾಟದ ಮೂಲಕ ಒಂದು ವಿಶಿಷ್ಟವಾದ ಚಟುವಟಿಕೆಯಲ್ಲಿ ತೊಡಗಬಹುದು. ಇದರಿಂದ ಶ್ರೇಷ್ಠ ಆಧ್ಯಾತ್ಮಿಕ ಸಾಧನೆಗಳು ಇವೆ. ಪ್ರಾಣಾಯಾಮದ ಮೂಲಕ ಪಾಪಗಳನ್ನು ಕಳೆದುಕೊಳ್ಳಬಹುದು. ಹೀಗೆ ಅನೇಕ ಉಪಯೋಗಗಳನ್ನು ಮನುಷ್ಯನು ಪ್ರಾಣದ ಮೂಲಕ ಪಡೆದುಕೊಳ್ಳಲು ಸಾಧ್ಯ ಎಂದರು.

   ಮನಸ್ಸೆಂಬ ಸೂಕ್ಷ್ಮ ಇಂದ್ರಿಯ ಎಲ್ಲ ಪ್ರಾಣಿಗಳಿಗೂ ಇದೆ. ಆದರೆ ಮನುಷ್ಯನ ಮನಸ್ಸಿಗೂ ಪ್ರಾಣಿಗಳ ಮನಸ್ಸಿಗೂ ತುಂಬ ವಿಭಿನ್ನತೆ ಇದೆ. ಅದರಲ್ಲಿ ಪ್ರಧಾನವಾದ ಒಂದು ವಿಭಿನ್ನತೆ ಎಂದರೆ ಮನುಷ್ಯನು ನಿನ್ನೆಗಳ ನೆನಪಾಗುತ್ತವೆ. ನಾಳೆಗಳ ಕಲ್ಪನೆ ಇದೆ. ತನ್ನ ಮುಂದಿನ ಭವಿಷ್ಯದ ಚಿಂತನೆ ಮಾಡುತ್ತಾನೆ. ಪ್ರಾಣಿಗಳಿಗೆ ಅಂತಹ ಯಾವ ಚಿಂತನೆಗಳೂ ಬರುವುದಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಮನುಷ್ಯನ ಶರೀರವೂ ಬಹಳ ವಿಶಿಷ್ಟವಾದದ್ದು, ಶರೀರದ ಒಳಗೆ ಇರುವ ಈ ಮೂರು ಸೂಕ್ಷ್ಮ ಕರಣಗಳೂ ಕೂಡ ಅಷ್ಟೇ ವಿಶಿಷ್ಟವಾದದ್ದು. ಈ ಮೂರನ್ನು ಮನುಷ್ಯನಿಗೆ ಸಂಸ್ಕಾರಕ್ಕೆ ಒಳಪಡಿಸಲು ಸಾಧ್ಯ. ಹೀಗಾಗಿ ಮನುಷ್ಯನಿಗೆ ಈ ಮೂರು ಕರಣಗಳು ಭಗವಂತನಿಂದ ಕೊಡಲ್ಪಟ್ಟಿದೆ.

   ನಮ್ಮ ಎಲ್ಲಾ ಧರ್ಮಾಚರಣೆಗಳು ಈ ಕರಣಗಳಿಗೆ ಸಂಸ್ಕಾರವನ್ನು ಉಂಟುಮಾಡುವ ಕೆಲಸ ಮಾಡುತ್ತವೆ. ಶಾಸ್ತ್ರೋಕ್ತವಾದ ಧಾರ್ಮಿಕ ಆಚರಣೆಗಳು ಎಲ್ಲವೂ ಪುಣ್ಯಗಳನ್ನೇ ಉಂಟುಮಾಡುತ್ತವೆ, ಯಾವದೂ ಪಾಪಗಳನ್ನು ಉಂಟುಮಾಡುವುದಿಲ್ಲ. ಮಾತು, ಪ್ರಾಣ, ಮನಸ್ಸುಗಳಿಗೆ ಸಂಸ್ಕಾರಗಳನ್ನು ನೀಡಿದರೆ ಏಕಾಗ್ರತೆಗೆ ಹೋಗುವ ಅಥವಾ ಅದಕ್ಕಿಂತ ಮುಂದಿನ ಹಂತಕ್ಕೆ ಏರುವ ಸಾಮರ್ಥ್ಯ ಬರುತ್ತದೆ. ಹೀಗೆ ಅನೇಕ ಪ್ರಯೋಜನಗಳು ಇವುಗಳಿಂದ ಲಭಿಸುತ್ತದೆ. ಮನುಷ್ಯನಾಗಿ ಹುಟ್ಟಿಬಂದಿದ್ದು ಅಭ್ಯುದಯ, ನಿಶ್ರೇಯಸ್ಸಿನ ಕಡೆಗೆ ಹೋಗುವುದಕ್ಕೆ. ಅದಕ್ಕಾಗಿ ಎಲ್ಲರೂ ಅದರ ಕಡೆ ಮುಖಮಾಡಿ ನಮ್ಮ ಎಲ್ಲ ಪ್ರಯತ್ನ ಮಾಡುವುದರ ಮೂಲಕ ಪರಮಾತ್ಮನ ಸಾಯುಜ್ಯ ಪಡೆಯುವ ಹಾಗೆ ಆಗಬೇಕು ಎಂದರು.

   ಸಂಸ್ಕಾರಗಳಿಲ್ಲದೆ ಮೇಲಕ್ಕೆ ಹತ್ತಲು ಬರುವುದಿಲ್ಲ. ಮೇಲಕ್ಕೆ ಹತ್ತಲು ಏಣಿ ಹೇಗೆ ಸಹಾಯ ಮಾಡುತ್ತದೆಯೋ ಹಾಗೆಯೇ ಸಂಸ್ಕಾರಗಳು ನಮ್ಮನ್ನು ಮೇಲಕ್ಕೆ ಹತ್ತಿಸಲು ಸಹಾಯ ಮಾಡುತ್ತದೆ ಎಂದರು.ಈ ವೇಳೆ ಪ್ರಮುಖರಾದ ವಿಶ್ವನಾಥ್ ಹೆಗಡೆ, ಗಣಪತಿ ಹೆಗಡೆ, ಶ್ರೀಕಾಂತ ಹೆಗಡೆ, ಗಣೇಶ ಭಟ್ ಇತರರು ಇದ್ದರು. ಶಿಷ್ಯರಿಂದ ಗಾಯತ್ರೀ ಅನುಷ್ಠಾನ, ಕುಂಕುಮಾರ್ಚನೆ, ಎಸ್ಸೆಸ್ಸೆಲ್ಸಿ‌ ಸಾಧಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

Recent Articles

spot_img

Related Stories

Share via
Copy link