ದಕ್ಷಿಣ ಕನ್ನಡ :
ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಆರೋಪದ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಗೆ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಯೂಟ್ಯೂಬರ್ ಸಮೀರ್, ಸುಜಾತ್ ಭಟ್ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ದಾಖಲಿಸಿದ್ದಾರೆ.
ಇಂದು ಧರ್ಮಸ್ಥಳದ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಯನ್ನು ಇಂದು ಪೊಲೀಸರು ಆತನ ನಿವಾಸದಿಂದ ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾದ ಹಿನ್ನೆಲೆ ಅವರ ನಿವಾಸಕ್ಕೆ ಆಗಮಿಸಿದ ಪೊಲೀಸರು ವಶಕ್ಕೆ ಪಡೆದು ಅವರದ್ದೇ ಕಾರಿನಲ್ಲಿ ಕರೆದೊಯ್ದಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿರುವ ಕುರಿತು ದೂರು ಸಲ್ಲಿಸಲಾಗಿತ್ತು.
ಉಡುಪಿ ಗ್ರಾಮಾಂತರ ಬಿಜೆಪಿಯ ಮಂಡಲಾಧ್ಯಕ್ಷ ರಾಜೀವ ಕುಲಾಲ್ ಅವರು ದೂರು ನೀಡಿದ್ದರು. ಈ ನಿಟ್ಟಿನಲ್ಲಿ ಆತನನ್ನು ವಶಕ್ಕೆ ಪಡೆಯಲು ಉಡುಪಿ ಪೊಲೀಸರ ತಂಡ ಉಜಿರೆಯ ತಿಮರೋಡಿಯಲ್ಲಿರುವ ಮಹೇಶ್ ಶೆಟ್ಟಿ ನಿವಾಸಕ್ಕೆ ಆಗಮಿಸಿತ್ತು. ಈ ವೇಳೆ ಅವರನ್ನು ಬಂಧಿಸದಂತೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಮಹೇಶ್ ಶೆಟ್ಟಿ ಪರ ಘೋಷಣೆ ಕೂಗಿ ಕೆಲ ಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಬಂಧನದ ವೇಳೆ ಮಹೇಶ್ ಶೆಟ್ಟಿ, ನನ್ನ ಜೀವಕ್ಕೆ ಏನಾದರೂ ಅಪಾಯ ಆದರೆ ಅದಕ್ಕೆ ರಾಜ್ಯ ಸರ್ಕಾರ ಮತ್ತು ಬಿಜೆಪಿಯೇ ಕಾರಣವಾಗುತ್ತದೆ. ನೊಟೀಸ್ ನೀಡದೇ ನನ್ನನ್ನು ಬಂಧಿಸಲಾಗುತ್ತಿದೆ. ಹೀಗೆ ಕರೆದೊಯ್ದು ನನ್ನನ್ನು ಏನು ಬೇಕಾದರೂ ಮಾಡುವ ಸಾಧ್ಯತೆ ಇದೆ ಎಂದು ಕೂಗಾಡಿದ್ದಾರೆ.








