ಬೆಂಗಳೂರು:
ಡಾ. ರಾಜ್ ಕುಮಾರ್ ಮಾತ್ರವಲ್ಲದೆ ಅವರ ಮಕ್ಕಳು ಕೂಡ ಸಿನಿಮಾ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದವರು.ಅದರಲ್ಲೂ ರಾಜ್ ಕುಮಾರ್ – ಪಾರ್ವತಮ್ಮ ದಂಪತಿಗಳ ಎರಡನೇ ಪುತ್ರನಾಗಿ ಜನಿಸಿದ ರಾಘವೇಂದ್ರ ರಾಜ್ ಕುಮಾರ್ ಕೆಲವೇ ಚಿತ್ರಗಳಲ್ಲಿ ನಟಿಸಿದ್ದರೂ ಇಂದಿಗೂ ಬಹಳಷ್ಟು ಖ್ಯಾತಿ ಪಡೆದವರು. ನಟನೆ ಮಾತ್ರ ವಲ್ಲದೆ ನಿರ್ಮಾಪಕರಾಗಿ ರಾಘವೇಂದ್ರ ರಾಜ್‌ಕುಮಾರ್ ಅವರು ಗುರುತಿಸಿಕೊಂಡಿದ್ದಾರೆ. ಆ.15ರಂದು 60ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದು ತಂದೆಯ ಹುಟ್ಟುಹಬ್ಬಕ್ಕೆ ಯುವ ಹಾಗೂ ವಿನಯ್ ರಾಜ್‌ಕುಮಾರ್ ಸ್ಪೇಷಲ್ ಗಿಫ್ಟ್ ನೀಡಿದ್ದಾರೆ. ತಂದೆಗೆ ದುಬಾರಿ ಬೆಲೆಯ ಕಾರನ್ನು ಗಿಫ್ಟ್ ನೀಡುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್ ಅವರ ಇಬ್ಬರು ಪುತ್ರರಾದ ವಿನಯ್ ರಾಜ್‌ಕುಮಾರ್ ಮತ್ತು ಯುವ ರಾಜ್‌ಕುಮಾರ್ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡುವ ಮೂಲಕ ಬರ್ತ್ ಡೇ ಆಚರಣೆ ಮಾಡಿದ್ದಾರೆ. ಇನ್ನೋವಾ ಹೈಬ್ರಿಡ್ ಕಾರನ್ನು ತನ್ನ ತಂದೆಗೆ ಗಿಫ್ಟ್ ಮಾಡಿದ್ದಾರೆ. ಈ ಕಾರಿನ ಬೆಲೆ ಸುಮಾರು 25 ರಿಂದ 42 ಲಕ್ಷ ರೂಪಾಯಿ ಎಂದು ವಿವಿಧ ಮೂಲಗಳಿಂದ ತಿಳಿದು ಬಂದಿದೆ. ಅದೇ ರೀತಿ ನಟನ ಹುಟ್ಟು ಹಬ್ಬಕ್ಕೆ ಅನೇಕ ಸ್ಯಾಂಡಲ್ವುಡ್ ಗಣ್ಯರು, ಅಭಿಮಾನಿಗಳು ರಾಘಣ್ಣನಿಗೆ ಶುಭಕೋರಿದ್ದು, ಫ್ಯಾನ್ಸ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಶುಭ ಹಾರೈಕೆಗಳನ್ನು ನೀಡಿದ್ದಾರೆ
ಶ್ರೀನಿವಾಸ ಕಲ್ಯಾಣ, ದಾರಿ ತಪ್ಪಿದ ಮಗ ಇತ್ಯಾದಿ ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿದ ಇವರು ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಸಿನಿಮಾದಲ್ಲಿ ನಾಯಕನಾಗಿ ಸಕ್ಸಸ್ ಪಡೆದರು. ಗಜಪತಿ ಗರ್ವಭಂಗ, ಆಸೆಗೊಬ್ಬ ಮೀಸೆಗೊಬ್ಬ, ಕಲ್ಯಾಣ ಮಂಟಪ, ಭರ್ಜರಿ ಗಂಡು ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿ ಫೇಮ್ ಗಿಟ್ಟಿಸಿಕೊಂಡಿದ್ದಾರೆ. ʻಪಕ್ಕದ್ಮನೆ ಹುಡುಗಿʼ ಸಿನಿಮಾ ಬಳಿಕ ಅವರು ನಟನೆಯಿಂದ ಗ್ಯಾಪ್ ತೆಗೆದುಕೊಂಡಿದ್ದರು. ಬಳಿಕ 2019ರಲ್ಲಿ ʻಅಮ್ಮನ ಮನೆʼ ಚಿತ್ರದ ಮೂಲಕ ಮತ್ತೆ ಸಿನಿಮಾ ಮಾಡಿದ್ದರು. ರಾಘವೇಂದ್ರ ರಾಜ್ ಕುಮಾರ್ ನಿರ್ಮಾಪಕರಾಗಿಯು ಹೆಸರು ಮಾಡಿದ್ದಾರೆ. ಹೋಮ್ ಬ್ಯಾನರ್ ವಜ್ರೇಶ್ವರಿ ಕಂಬೈನ್ಸ್ ನಿರ್ವಹಣೆ ಜೊತೆಗೆ ಜಾಕಿ, ಅಣ್ಣಬಾಂಡ್, ಯಾರೇ ಕೂಗಾಡಲಿ, ರನ್ ಆಂಟೋನಿ ಸಿನಿಮಾಗಳನ್ನು ನಿರ್ಮಿಸಿದ್ದಾರೆ.








