ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಕೇಸ್‌ : ಆರೋಪಿಗಳ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಕೆ

ಕೋಲ್ಕತ್ತಾ:

    ಕಾನೂನು ಕಾಲೇಜು ವಿದ್ಯಾರ್ಥಿನಿ ಮೇಲೆ ಇತ್ತೀಚೆಗೆ ನಡೆದ ಅತ್ಯಾಚಾರ  ಪ್ರಕರಣಕ್ಕೆ ಸಂಬಂಧಿಸಿ ಕೋಲ್ಕತ್ತಾ ಪೊಲೀಸರು  ಆರೋಪಿಗಳ ವಿರುದ್ಧ 650 ಪುಟಗಳ ಆರೋಪಪಟ್ಟಿಯನ್ನು ಅಲಿಪೋರ್ ನ್ಯಾಯಾಲಯಕ್ಕೆ  ಸಲ್ಲಿಸಿದ್ದಾರೆ. ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜು  ವಿದ್ಯಾರ್ಥಿನಿ ಮೇಲೆ ಜೂನ್ 25 ರಂದು ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಮನೋಜಿತ್ ಮಿಶ್ರಾ, ಜೈಬ್ ಅಹ್ಮದ್, ಪ್ರಮಿತ್ ಮುಖರ್ಜಿ ಮತ್ತು ಪಿನಾಕಿ ಬ್ಯಾನರ್ಜಿ ವಿರುದ್ಧ ಇದೀಗ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

   ಅಲಿಪೋರ್  ನ್ಯಾಯಾಲಯಕ್ಕೆ ಸಲ್ಲಿಸಲಾದ 650 ಪುಟಗಳ ಆರೋಪ ಪಟ್ಟಿಯಲ್ಲಿ ಯುವತಿಯ ವೈದ್ಯಕೀಯ ಪರೀಕ್ಷೆಯ ವರದಿಯನ್ನು ಸಲ್ಲಿಸಲಾಗಿದ್ದು, ಇದರಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿರುವುದು ದೃಢಪತ್ತಿದೆ. ಆರೋಪಿಗಳ ಡಿಎನ್‌ಎ ವಿಧಿವಿಜ್ಞಾನ ಮಾದರಿಗಳೊಂದಿಗೆ ಹೊಂದಿಕೆಯಾಗಿದೆ ಎನ್ನಲಾಗಿದೆ.

  ಪುರಾವೆಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಬಲವಂತದ ಬಂಧನ, ಅಪಹರಣ, ಸಾಕ್ಷ್ಯಗಳ ನಾಶ, ತನಿಖೆಯನ್ನು ದಾರಿ ತಪ್ಪಿಸುವ ಪ್ರಯತ್ನ ಮೊದಲಾದ ಆರೋಪಗಳ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮನೋಜಿತ್ ಮಿಶ್ರಾ ಸಂತ್ರಸ್ತೆಯ ಹಲವು ಅಶ್ಲೀಲ ವಿಡಿಯೊಗಳನ್ನು ಮಾಡಿ ಅವುಗಳನ್ನು ಬಳಸಿಕೊಂಡು ಆಕೆಗೆ ಬೆದರಿಕೆ ಒಡ್ಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

   ವಿದ್ಯಾರ್ಥಿನಿ ನೀಡಿರುವ ದೂರಿನ ಪ್ರಕಾರ ಕಾಲೇಜಿನ ಹಳೆಯ ವಿದ್ಯಾರ್ಥಿ ಮನೋಜಿತ್ ಮಿಶ್ರಾ, ವಿದ್ಯಾರ್ಥಿಗಳಾದ ಜೈಬ್ ಅಹ್ಮದ್ ಮತ್ತು ಪ್ರಮಿತ್ ಮುಖರ್ಜಿ ಕ್ಯಾಂಪಸ್‌ನಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇದಕ್ಕೆ ಭದ್ರತಾ ಸಿಬ್ಬಂದಿ ಪಿನಾಕಿ ಬ್ಯಾನರ್ಜಿ ಸಹಕರಿಸಿದ್ದಾರೆ ಎಂದು ತಿಳಿಸಿದ್ದಳು.

   ತನಿಖೆಯ ವೇಳೆ ಕಂಡು ಬಂದ ಸಿಸಿಟಿವಿ ದೃಶ್ಯವಾಳಿಗಳ ಪ್ರಕಾರ, ಆರೋಪಿಗಳು ಸಂತ್ರಸ್ತೆಯನ್ನು ಎಳೆದುಕೊಂಡು ಹೋಗಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾರೆ. ಇತರ ಆರೋಪಿಗಳ ಫೋನ್‌ಗಳಲ್ಲಿ ಸಂತ್ರಸ್ತೆಯ ಅಶ್ಲೀಲ ವಿಡಿಯೊಗಳು ಸಿಕ್ಕಿವೆ. ಈ ವಿಡಿಯೊಗಳನ್ನು ಗೋಡೆಯ ಮೇಲಿನ ಎಕ್ಸಾಸ್ಟ್ ಫ್ಯಾನ್‌ನ ರಂಧ್ರದ ಮೂಲಕ ರೆಕಾರ್ಡ್ ಮಾಡಲಾಗಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ. 

   2022 ರಲ್ಲಿ ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನಿಂದ ಪದವಿ ಪಡೆದ ಮನೋಜಿತ್ ಮಿಶ್ರಾ ಸಂಸ್ಥೆಯಿಂದ ಹೊರಬಂದ ಅನಂತರವೂ ಕ್ಯಾಂಪಸ್‌ನಲ್ಲಿ ತನ್ನ ಪ್ರಭಾವವನ್ನು ಉಳಿಸಿಕೊಂಡಿದ್ದಾನೆ. ಈತ ಹಲವಾರು ಹಲ್ಲೆ ಪ್ರಕರಣಗಳಲ್ಲಿ ಶಾಮೀಲಾಗಿರುವ ಆರೋಪ ಹೊಂದಿದ್ದಾನೆ. ಈತ ಪ್ರಸ್ತುತ ಟಿಎಂಸಿಪಿ ಸಂಘಟನೆಯ ದಕ್ಷಿಣ ಕೋಲ್ಕತ್ತಾ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿಯಾಗಿದ್ದಾನೆ. 2017 ರಲ್ಲಿ ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನಲ್ಲಿ ಟಿಎಂಸಿಪಿ ಘಟಕದ ಅಧ್ಯಕ್ಷನಾಗಿದ್ದನು.

Recent Articles

spot_img

Related Stories

Share via
Copy link