ಬೆಂಗಳೂರು:
ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಆಗಿರುವ ಜಗದೀಶ್ ಅಲಿಯಾಸ್ ಜಗ್ಗನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪ್ರಮುಖ ಆರೋಪಿ ಆಗಿರುವ ಜಗ್ಗ ಕೊಲೆಯಾದ ದಿನವೇ ಬೆಂಗಳೂರು ಬಿಟ್ಟು ಪರಾರಿಯಾಗಿದ್ದ. ಇದೀಗ ಸಿಐಡಿ ಅಧಿಕಾರಿಗಳು ಆರೋಪಿ ಜಗ್ಗನನ್ನು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಗದೀಶ್ ಅಲಿಯಾಸ್ ಜಗ್ಗನಿಗೆ ಸಿಐಡಿ ಪೋಲೀಸರು ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ್ದು, ಕೆಲ ದಿನಗಳಿಂದ ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಇಂದು ಆರೋಪಿ ಜಗ್ಗನನ್ನು ಬಂಧಿಸಲಾಗಿದೆ. ರೌಡಿಶೀಟರ್ ಶಿವಪ್ರಕಾಶ್ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್ ಹೆಸರು ತಳುಕು ಹಾಕಿಕೊಂಡಿದ್ದು, ಬೈರತಿ ಬಸವರಾಜ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಭಾರತಿನಗರ ಠಾಣೆಯಲ್ಲಿ ಬೈರತಿ ಬಸವರಾಜ್ ಸೇರಿದಂತೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಾಜಿ ಸಚಿವ ಬೈರತಿ ಬಸವರಾಜ್ ಎ5 ಆರೋಪಿಯಾಗಿದ್ದಾರೆ. ಜಗದೀಶ್ ಎ1, ಕಿರಣ್ ಎ2, ವಿಮಲ್ ಎ 3, ಅನಿಲ್ ಎ4 ಆರೋಪಿಗಳಾಗಿದ್ದಾರೆ.
ಎ1 ಆರೋಪಿಯಾಗಿದ್ದ ಜಗ್ಗನಿಗಾಗಿ ಶೋಧಕಾರ್ಯ ನಡೆಯುತ್ತಿತ್ತು. ಕೊನೆಗೂ ಆತ ದೆಹಲಿಯಲ್ಲಿ ತಲೆ ಮರೆಸಿಕೊಂಡಿದ್ದು ಗೊತ್ತಾಗಿದ್ದು, ಪೊಲೀಸರು ದೆಹಲಿಯಲ್ಲಿ ಜಗ್ಗನನ್ನು ಬಂಧಿಸಿದ್ದಾರೆ. ಈಗ ಬೆಂಗಳೂರಿಗೆ ಕರೆತರುವ ಪ್ರಕ್ರಿಯೆ ನಡೆಯುತ್ತಿದೆ. ಸಿಐಡಿಯ ತನಿಖಾಧಿಕಾರಿಗಳು ಜಗ್ಗನ ಸ್ಥಳವನ್ನು ಪತ್ತೆಹಚ್ಚಲು ತಿಂಗಳುಗಟ್ಟಲೆ ಕಾರ್ಯಾಚರಣೆ ನಡೆಸಿದ್ದರು. ಆತನ ಫೋನ್ ಕಾಲ್ ರೆಕಾರ್ಡ್ಗಳು, ಸಾಮಾಜಿಕ ಜಾಲತಾಣದ ಚಟುವಟಿಕೆಗಳು ಮತ್ತು ಗುಪ್ತಚರ ಮಾಹಿತಿಯ ಆಧಾರದ ಮೇಲೆ ದೆಹಲಿಯಲ್ಲಿ ಆತನನ್ನು ಗುರುತಿಸಲಾಯಿತು.
ಈ ಪ್ರಕರಣದಲ್ಲಿ ಬೈರತಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿತ್ತು. ಇದರಿಂದ ಶಾಸಕ ಬೈರತಿ ಬಸವರಾಜ್ಗೆ ಕೊಂಚ ರಿಲೀಫ್ ಸಿಕ್ಕಿತ್ತು. ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ. ಬೆಂಗಳೂರಿನ ಹಲಸೂರು ಕೆರೆ ಬಳಿ ಜುಲೈ 15ರ ರಾತ್ರಿ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದಿದ್ದರು








