ನವದೆಹಲಿ:
ಸಂಸತ್ತಿನಲ್ಲಿ ಇತ್ತೀಚೆಗೆ ‘ಆನ್ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025’ ಅಂಗೀಕಾರವಾದ ನಂತರ ಬಿಸಿಸಿಐನೊಂದಿಗೆ ಬರೋಬ್ಬರಿ ₹358 ಕೋಟಿ ಮೊತ್ತದ ಜೆರ್ಸಿ ಪ್ರಾಯೋಜಕತ್ವ ಒಪ್ಪಂದವನ್ನು ಡ್ರೀಮ್11 ಕೊನೆಗೊಳಿಸಿತ್ತು. ಹೀಗಾಗಿ ಬಿಸಿಸಿಐ ನೂತನ ಪ್ರಾಯೋಜಕತ್ವದ ಹುಡುಕಾಟ ಆರಂಭಿಸಿದೆ. ಬಿಸಿಸಿಐ ಪ್ರಾಯೋಜಕತ್ವಕ್ಕೆ ಇನ್ನೂ ಟೆಂಡರ್ ಆಹ್ವಾನಿಸದಿದ್ದರೂ ಟೊಯೋಟಾ ಮೋಟಾರ್ ಕಾರ್ಪೊರೇಷನ್ ಸೇರಿದಂತೆ ಎರಡು ಕಂಪನಿಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಪ್ರಮುಖ ಪ್ರಾಯೋಜಕರಾಗಲು ಆಸಕ್ತಿ ತೋರಿಸಿವೆ ಎಂದು ತಿಳಿದುಬಂದಿದೆ.
2023ರಲ್ಲಿ ಮೂರು ವರ್ಷಗಳ ಅವಧಿಗೆ ಡ್ರೀಮ್11 ಒಪ್ಪಂದ ಮಾಡಿಕೊಂಡಿತ್ತು. ಅಲ್ಲದೆ ಟೀಮ್ ಇಂಡಿಯಾದ ಜೆರ್ಸಿಯಲ್ಲಿ ತನ್ನ ಲೊಗೊವನ್ನು ಮುದ್ರಿಸಿತ್ತು. ಜಪಾನ್ ಮೂಲದ ಟೊಯೋಟಾ ಕಂಪೆನಿ ಪ್ರಸಕ್ತ ಇಂಗ್ಲೆಂಡ್ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕ ಹೊಂದಿದೆ. ಈ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವವನ್ನೂ ಹೊಂದಿತ್ತು. ಟೊಯೋಟಾ ಜತೆ ಫಿನ್ಟೆಕ್ ಸ್ಟಾರ್ಟ್ಅಪ್ ಸಹಿತ ಕೆಲ ಕಂಪೆನಿಗಳ ನಡುವೆ ಪೈಪೋಟಿ ಆರಂಭಗೊಂಡಿದೆ.
ಸೆಪ್ಟೆಂಬರ್ನಲ್ಲಿ ಪ್ರಾರಂಭವಾಗಲಿರುವ ಏಷ್ಯಾ ಕಪ್ 2025 ಮತ್ತು ಐಸಿಸಿ ಮಹಿಳಾ ವಿಶ್ವಕಪ್ 2025 ಕ್ಕೆ ಕೆಲವೇ ದಿನಗಳು ಉಳಿದಿರುವುದರಿಂದ, ಹೊಸ ಪ್ರಾಯೋಜಕರನ್ನು ಪಡೆಯಲು ಬಿಸಿಸಿಐಗೆ ಹೆಚ್ಚು ಸಮಯ ಉಳಿದಿಲ್ಲ. ಒಂದು ವೇಳೆ, ಬಿಸಿಸಿಐ ಯಾವುದೇ ಹೊಸ ಪ್ರಾಯೋಜಕರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಭಾರತೀಯ ತಂಡಗಳು ಏಷ್ಯಾ ಕಪ್ ಮತ್ತು ಐಸಿಸಿ ಮಹಿಳಾ ವಿಶ್ವಕಪ್ ರಲ್ಲಿ ಪ್ರಾಯೋಜಕತ್ವವಿಲ್ಲದೆ ಆಡಲಿದೆ.
