ಶಿರಸಿ :
ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳಿಗೆ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ದಿಲೀಷ್ ಶಶಿ ಅವರು ಭೇಟಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪುನಶ್ಚೇತನಗೊಳಿಸಲಾದ ಕಲಗಾರ್ ಗ್ರಾಮದ ಕಲ್ಯಾಣಿ ಕಾಮಗಾರಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೂ ಕಡಕೋಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಗತಿಯಲ್ಲಿರುವ ಅಡುಗೆಕೋಣೆ ಕಾಮಗಾರಿಯನ್ನು ಪರಿಶೀಲಿಸಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಬಿಸಿಯೂಟ ತಯಾರಿಕೆಗೆ ಅನುವು ಮಾಡಿಕೊಡುವಂತೆ ಸೂಚಿಸಿದರು.
ಈ ವೇಳೆ ಅಂಗನವಾಡಿ ಕೇಂದ್ರ ಹಾಗೂ ಶಾಲಾ ಕೊಠಡಿಗಳಲ್ಲಿ ಮಕ್ಕಳೊಂದಿಗೆ ಸಂವಹನ ನಡೆಸಿದರು.ಹಾಗೆಯೇ ಹುಲೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಟ್ಟಡ ಹಾಗೂ ಅಲ್ಲಿನ ಸುವ್ಯವಸ್ಥೆ ಕುರಿತು ಪರಿಶೀಲಿಸಿ ಕುಂದುಕೊರತೆ ಬಗ್ಗೆ ಮಾಹಿತಿ ಪಡೆದರು. ಹಾಗೂ ಔಷಧಿ ಮಳಿಗೆಯಲ್ಲಿ ಅವಶ್ಯಕತೆಗೆ ತಕ್ಕಂತೆ ಔಷಧಿ ಪೂರೈಕೆ, ರೋಗಿಗಳಿಗೆ ಬೆಡ್ ವ್ಯವಸ್ಥೆ, ಚಿಕಿತ್ಸಾ ಸಲಕರಣೆಗಳನ್ನು ಪರಿಶೀಲಿಸಿ ಯಾವುದೇ ಕುಂದುಕೊರತೆಯಾಗದಂತೆ ಚಿಕಿತ್ಸೆ ನೀಡಲು ಸಿದ್ದರಿರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಹುಲೇಕಲ್ ಗ್ರಾಮದಲ್ಲಿ ಸಂಜೀವಿನಿ ಒಕ್ಕೂಟದಡಿ ಕೈಗೊಳ್ಳಲಾದ ಎಣ್ಣೆ ಹಾಗೂ ಹಿಟ್ಟಿನ ಗಿರಣಿಗೆ ಭೇಟಿ ನೀಡಿ ಮಹಿಳೆಯರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಇಂತಹ ಅಭಿವೃದ್ಧಿ ಚಟುವಟಿಕೆಗಳು ಇನ್ನೂ ಹೆಚ್ಚು ಅನುಕೂಲ ಕಲ್ಪಿಸುವಂತಾಗಲಿ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್ ಅಂಬೇಡ್ಕರ್ ಹೆಣ್ಣುಮಕ್ಕಳ ವಸತಿ ನಿಲಯದಲ್ಲಿ ಕಟ್ಟಡದಲ್ಲಿ ನೀರು ಸೋರಿಕೆ ತಡೆಗಟ್ಟಿ ಈ ಕುರಿತು ಶೀಘ್ರ ಮಾಹಿತಿಯನ್ನು ಜಿಲ್ಲಾ ಪಂಚಾಯತ್ ಕ್ಕೆ ನೀಡಲು ಸೂಚನೆ ನೀಡಿದರು. ಅಲ್ಲದೆ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಬಿಸಿನೀರು, ಆಹಾರ ಪದಾರ್ಥಗಳನ್ನು ಪರಿಶೀಲಿಸಿ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆಯಾಗದಂತೆ ಆಹಾರ ನೀಡಲು ತಿಳಿಸಿದರು.ಉಂಚಳ್ಳಿ ಗ್ರಾಮ ಪಂಚಾಯತ್ ನ ಹೊಸ ಕಟ್ಟಡವನ್ನು ವೀಕ್ಷಿಸಿ ಪಂಚಾಯತ್ ಕಮಿಟಿ ಹಾಗೂ ಅಧಿಕಾರಿಗಳು ಸಿಬ್ಬಂದಿಗಳಿಗೆ ಅಭಿನಂದಿಸಿದರು.ಈ ವೇಳೆ ಸ್ವಚ್ಛ ಸಂಕೀರ್ಣ ಘಟಕದ ಸಿಬ್ಬಂದಿಗಳ ಕೆಲಸ ಹಾಗೂ ಗ್ರಂಥಾಲಯ ಅಭಿವೃದ್ಧಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಚನ್ನಬಸಪ್ಪ ಹಾವಣಗಿ, ಯೋಜನಾಧಿಕಾರಿಗಳಾದ ಅಶೋಕ್ ನಾಯ್ಕ, ತಾ. ಪಂ ವ್ಯವಸ್ಥಾಪಕರಾದ ಸುಬ್ರಾಯ ಭಟ್, ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು,ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.








