ಬಿಸಿಸಿಐ ಮುಂದಿನ ಅಧ್ಯಕ್ಷರಾಗ್ತಾರ ಸಚಿನ್​ ತೆಂಡುಲ್ಕರ್?

ನವದೆಹಲಿ: 

    ಇದೇ ತಿಂಗಳಾಂತ್ಯದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಾರ್ಷಿಕ ಸರ್ವಸದಸ್ಯರ ಸಭೆ ನಡೆಯಲಿದೆ. ಮಂಡಳಿಯ ಅಧ್ಯಕ್ಷ ಮತ್ತು ಐಪಿಎಲ್ ಆಡಳಿತ ಸಮಿತಿಯ ಮುಖ್ಯಸ್ಥರು ಸೇರಿದಂತೆ ಪ್ರಮುಖ ಹುದ್ದೆಗಳಿಗೆ ಪದಾಧಿಕಾರಿಗಳ ಆಯ್ಕೆ ಈ ಸಭೆಯಲ್ಲಿ ನಡೆಯಲಿದೆ. ಸಭೆಗೂ ಮುನ್ನವೇ ಅತ್ಯಂತ ಕುತೂಹಲಕಾರಿ ಬೆಳವಣಿಗೆಯೊಂದು ಸಂಭವಿಸಿದ್ದು, ಬಿಸಿಸಿಐ ಅಧ್ಯಕ್ಷ  ಹುದ್ದೆಗೆ ದಿಗ್ಗಜ ಸಚಿನ್​ ತೆಂಡುಲ್ಕರ್ ಹೆಸರು ಕೇಳಿಬಂದಿದೆ. ಆದ್ದರಿಂದ ಈ ಸಭೆಯು ಅಪಾರ ಕುತೂಹಲ ಕೆರಳಿಸಿದೆ. ಬಿಸಿಸಿಐ ವಾರ್ಷಿಕ ಮಹಾಸಭೆ ಸೆ.28ರಂದು ಮುಂಬೈನಲ್ಲಿ ನಿಗದಿಯಾಗಿದ್ದು, ಅದೇ ದಿನ ಹೊಸ ಅಧ್ಯಕ್ಷರ ಆಯ್ಕೆಯೂ ನಡೆಯಲಿದೆ.

    ಆವರ್ತನ ಪದ್ಧತಿಯನ್ವಯ ಈ ಬಾರಿ ಅಧ್ಯಕ್ಷ ಹುದ್ದೆಯನ್ನು ಪಶ್ಚಿಮ ವಲಯದ ಅಭ್ಯರ್ಥಿಗೆ ನೀಡಲು ಬಿಸಿಸಿಐ ವಲಯದಲ್ಲಿ ಒಲವು ಮೂಡಿದೆ. ಹೀಗಾಗಿ ಬಿಸಿಸಿಐ ಯೋಜನೆಯ ಅನ್ವಯ, ತೆಂಡುಲ್ಕರ್​ಗೆ ಆಫರ್​ ನೀಡಲಾಗಿದೆ. ಸಚಿನ್​ ಇದಕ್ಕೆ ಒಪ್ಪುವರೇ ಎಂಬುದು ಸದ್ಯದ ಬಹುದೊಡ್ಡ ಕುತೂಹಲವಾಗಿದೆ. ಒಂದು ವೇಳೆ ಸಚಿನ್​ ಒಪ್ಪಿದರೆ, ಯಾವುದೇ ಚುನಾವಣೆ ಇಲ್ಲದೆ ಅವರ ಆಯ್ಕೆ ಔಪಚಾರಿಕತೆ ಪೂರ್ಣಗೊಳ್ಳಲಿದೆ.

   ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ ಅವರು ಜುಲೈನಲ್ಲಿ ತಮ್ಮ 70ನೇ ಜನ್ಮದಿನ ಆಚರಿಸಿಕೊಂಡಿದ್ದರು. ಸದ್ಯದ ನಿಯಮಾವಳಿಯ ಪ್ರಕಾರ 70 ವರ್ಷ ಮೇಲ್ಪಟ್ಟವರು ಪದಾಧಿಕಾರಿಯಾಗಿ ಮುಂದುವರಿಯುವಂತಿಲ್ಲ. ಅದರಿಂದಾಗಿ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಯಲಿದೆ. ಸದ್ಯ ಹಂಗಾಮಿ ಅಧ್ಯಕ್ಷರಾಗಿ ರಾಜೀವ್ ಶುಕ್ಲಾ ಕಾರ್ಯನಿರ್ವಹಿಸುತ್ತಿದ್ದಾರೆ.

   ಪ್ರಸ್ತುತ ಐಪಿಎಲ್ ಮುಖ್ಯಸ್ಥರಾಗಿರುವ ಅರುಣ್ ಧುಮಾಲ್ ಅವರು ಪದಾಧಿಕಾರಿಯಾಗಿ ಒಟ್ಟು ಆರು ವರ್ಷಗಳನ್ನು ಪೂರೈಸಿದ್ದಾರೆ. ಆದ್ದರಿಂದ ಅವರು ಮುಂಬರುವ ಮೂರು ವರ್ಷಗಳ ಕಾಲ ಕಡ್ಡಾಯವಾಗಿ ಕೂಲಿಂಗ್ ಆಫ್‌ ನಿಯಮ ಪಾಲಿಸಬೇಕು. ಆದ್ದರಿಂದ ಅವರು ಯಾವುದೇ ಹುದ್ದೆಯನ್ನು ಪಡೆಯುವಂತಿಲ್ಲ. ಅದರಿಂದಾಗಿ ಅವರ ಉತ್ತರಾಧಿಕಾರಿಯನ್ನು ನೇಮಕ ಮಾಡುವ ಪ್ರಕ್ರಿಯೆ ನಡೆಯಲಿದೆ.

   ಈ ಸ್ಥಾನಕ್ಕಾಗಿ ಮುಂಬೈ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸಂಜಯ್ ನಾಯಕ ಮತ್ತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರ ಹೆಸರುಗಳು ಕೇಳಿಬರುತ್ತಿವೆ. ಕಾಂಗ್ರೆಸ್ ಪಕ್ಷದವರಾಗಿರುವ ಶುಕ್ಲಾ ಅವರು ಐಪಿಎಲ್ ಮುಖ್ಯಸ್ಥರಾಗಿ ನೇಮಕವಾದರೆ, ಬಿಸಿಸಿಐ ಉಪಾಧ್ಯಕ್ಷ ಸ್ಥಾನಕ್ಕೆ ಬಿಹಾರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಹಾಗೂ ಬಿಜೆಪಿ ಧುರೀಣ ರಾಕೇಶ್ ತಿವಾರಿ ಅವರು ಸ್ಪರ್ಧಿಸುವ ಸಾಧ್ಯತೆ ಇದೆ.

Recent Articles

spot_img

Related Stories

Share via
Copy link