ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಆಯ್ಕೆ ವಿರೋಧಿಸಿ ಮತ್ತೆರಡು ಪಿಐಎಲ್

ಬೆಂಗಳೂರು:

    ಮೈಸೂರು ದಸರಾ  ಉದ್ಘಾಟನೆಗೆ ಲೇಖಕಿ, ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್  ಆಯ್ಕೆಗೆ ವಿರೋಧ ಮುಂದುವರಿದಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿ ಮತ್ತೆರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ. ಕೆಲ ದಿನಗಳ ಹಿಂದೆ ಮಾಜಿ ಸಂಸದ ಪ್ರತಾಪ್‌ ಸಿಂಹ ಇದನ್ನು ವಿರೋಧಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

   ನಾಡಹಬ್ಬ ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್‌ರನ್ನು ಮುಖ್ಯ ಅತಿಥಿಯಾಗಿ ರಾಜ್ಯ ಸರಕಾರ ಆಹ್ವಾನಿಸಿದೆ. 2 ದಿನಗಳ ಹಿಂದಷ್ಟೇ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಹಿಂದೂ ಸಂಘಟನೆಗಳು ಚಾಮುಂಡಿ ಚಲೋ ನಡೆಸಿದ್ದವು. ಮತ್ತೊಂದೆಡೆ, ದಲಿತ ಸಂಘಟನೆಗಳು ಬಾನು ಮುಷ್ತಾಕ್ ಬೆಂಬಲಿಸಿ ಹೋರಾಟ ಮಾಡಿದ್ದವು. ಇದೀಗ ಕಾನೂನು ಹೋರಾಟ ಕೂಡ ಜೋರಾಗುತ್ತಿದೆ.

   ಹಿಂದೂ ಅಲ್ಲದ ಬಾನು ಮುಷ್ತಾಕ್‌ರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ನಿರ್ಧಾರ ವಾಪಸ್‌ ಪಡೆಯಲು ಸರಕಾರಕ್ಕೆ ನಿರ್ದೇಶನ ನೀಡಬೇಕು. ಅದೇ ರೀತಿ ದಸರಾ ಉದ್ಘಾಟನೆಯು ಹಿಂದೂ ಧಾರ್ಮಿಕ ಸಂಪ್ರದಾಯದ ಅವಿಭಾಜ್ಯ ಭಾಗವೆಂದು ಘೋಷಿಸಿ ಅದನ್ನು ಹಿಂದೂ ಗಣ್ಯರಿಂದ ಉದ್ಘಾಟಿಸಬೇಕು. ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಹಿಂದೂ ಆಗಮಿಕ ಪದ್ಧತಿ ಪ್ರಕಾರವೇ ಕಟ್ಟುನಿಟ್ಟಾಗಿ ದಸರಾ ಉದ್ಘಾಟನೆ ನೆರವೇರಿಸಲು ನಿರ್ದೇಶನ ನೀಡಬೇಕು ಎಂದು ಬೆಂಗಳೂರಿನ ನಿವಾಸಿ ಎಚ್‌.ಎಸ್‌.ಗೌರವ್‌ ಕೋರಿದ್ದಾರೆ.

    ಬೆಂಗಳೂರಿನ ಉದ್ಯಮಿ ಟಿ.ಗಿರೀಶ್‌ ಕುಮಾರ್‌ ಹಾಗೂ ಅಭಿನವ ಭಾರತ್‌ ಪಾರ್ಟಿಯ ರಾಷ್ಟ್ರೀಯ ಉಪಾಧ್ಯಕ್ಷೆ ಆರ್‌.ಸೌಮ್ಯ ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಎರಡೂ ಅರ್ಜಿಗಳು ವಿಚಾರಣೆಗೆ ಬರಬೇಕಿದೆ. ಬಾನು ಮುಷ್ತಾಕ್‌ರ ಆಯ್ಕೆ ವಿರೋಧಿಸಿ ಕೋರ್ಟ್‌ಗೆ ಒಟ್ಟು 3 ಅರ್ಜಿಗಳು ಸಲ್ಲಿಕೆಯಾಗಿವೆ.

   ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆಗೆ ಬಿಜೆಪಿ, ದಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಾಮುಂಡಿತಾಯಿಗೆ ಸಿದ್ದರಾಮಯ್ಯ ಅಪಮಾನ ಮಾಡಲು ಹೊರಟಿದ್ದಾರೆ ಎಂದು ಪ್ರತಿಪಕ್ಷ ಆರ್.ಅಶೋಕ್ ಕಿಡಿಕಾರಿದರೆ, ಬಾನು ಮುಷ್ತಾಕ್‌ ದಸರಾ ಉದ್ಘಾಟಿಸುವುದೇ ಆದರೆ ಅರಿಶಿಣ, ಕುಂಕುಮ, ಹೂವು ತೊಟ್ಟು ದೇವಿಯ ಪೂಜೆ ನೆರವೇರಿಸಲಿ ಎಂದು ಜೆಡಿಎಸ್ ಶಾಸಕ ಎಂ.ಮಂಜು ಹೇಳಿದ್ದಾರೆ.

Recent Articles

spot_img

Related Stories

Share via
Copy link