ಬೆಂಗಳೂರು :
ತಂತ್ರಜ್ಞಾನ ಮುಂದುವರಿದಂತೆ ಅದರಿಂದ ಎಷ್ಟು ಲಾಭ ಆಗುತ್ತಿದೆಯೋ ಅಷ್ಟೇ ನಷ್ಟವನ್ನು ಕೂಡ ಆಗುತ್ತಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಇದರಿಂದ ನಷ್ಟ ಅನುಭವಿಸುತ್ತಿದ್ದಾರೆ. ಈಗ ಪ್ರಿಯಾಂಕಾ ಉಪೇಂದ್ರ ಇದಕ್ಕೆ ಹೊಸ ಉದಾಹರಣೆ. ಅವರ ಮೊಬೈಲ್ ಅನ್ನು ಹ್ಯಾಕ್ ಮಾಡಿದ ವ್ಯಕ್ತಿ, ಬೇರೆ ಬೇರೆ ವ್ಯಕ್ತಿಗಳಿಗೆ ವಾಟ್ಸಾಪ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾನೆ. ಈ ವಿಚಾರ ಅವರ ಗಮನಕ್ಕೆ ಬಂದಿದ್ದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಲಾಗುತ್ತಿದೆ.
ಮೊಬೈಲ್ ಹ್ಯಾಕ್ ಆದ ಬಗ್ಗೆ ಉಪೇಂದ್ರ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಸಿನಿಮಾಗಳಲ್ಲಿ ಮೊಬೈಲ್ಗಳನ್ನು ಹ್ಯಾಕ್ ಮಾಡುವಂತೆ ಇಲ್ಲಿಯೂ ಆಗಿದೆ. ‘ಪ್ರಿಯಾಂಕಾಗೆ ಬೆಳಿಗ್ಗೆ ಒಂದು ಮೆಸೇಜ್ ಬಂತು. ಪ್ರಿಯಾಂಕಾ ಆರ್ಡರ್ ಮಾಡಿದ ಪಾರ್ಸಲ್ ಒಂದು ಬರೋದಿತ್ತು. ಪಾರ್ಸಲ್ ಸಂಬಂಧದ್ದೇ ಮೆಸೇಜ್ ಇದು ಎಂದು ಅವಳು ಭಾವಿಸಿದಳು. ಹ್ಯಾಶ್ ಟ್ಯಾಗ್ ಒತ್ತಿ ಆ ನಂಬರ್ ಡಯಲ್ ಮಾಡಿ, ಈ ನಂಬರ್ ಡಯಲ್ ಮಾಡಿ ಎಂದು ಮೆಸೇಜ್ ಮಾಡಿದಾತ ಹೇಳಿದ್ದಾನೆ. ಅವಳು ಹಾಗೆ ಮಾಡಿದಳು. ಅಲ್ಲಿ ಆಗುತ್ತಿಲ್ಲ ಎಂದು ನನ್ನ ಮೊಬೈಲ್ನಿಂದಲೂ ಪ್ರಯತ್ನಿಸಿದ್ದಾಳೆ. ಹೀಗಾಗಿ, ನನ್ನ ಮೊಬೈಲ್ ಕೂಡ ಹ್ಯಾಕ್ ಆಗಿದೆ ಎನಿಸುತ್ತಿದೆ’ ಎಂದು ಉಪೇಂದ್ರ ಹೇಳಿದ್ದಾರೆ.
‘ನನ್ನ ಮೊಬೈಲ್ನಿಂದ ಅಥವಾ ಪ್ರಿಯಾಂಕಾ ಮೊಬೈಲ್ನಿಂದ ಹಣ ಕೊಡಿ ಎಂದು ಮೆಸೇಜ್ ಬಂದರೆ ಇಗ್ನೋರ್ ಮಾಡಿ’ ಎಂದು ಉಪೇಂದ್ರ ಕೇಳಿಕೊಂಡಿದ್ದಾರೆ. ಈಗಾಗಲೇ ಪ್ರಿಯಾಂಕಾ ವಾಟ್ಸಾಪ್ನಿಂದ ಕೆಲವರಿಗೆ ಮೆಸೇಜ್ ಹೋಗಿದೆ. ‘ನನ್ನ ಮೊಬೈಲ್ ಯುಪಿಐ ವರ್ಕ್ ಆಗುತ್ತಿಲ್ಲ. ನೀವು ಹಣ ಕಳುಹಿಸಿ. 2 ಗಂಟೆಯಲ್ಲಿ ಕಳುಹಿಸುತ್ತೇವೆ’ ಎಂದು ಹ್ಯಾಕರ್ ಪ್ರಿಯಾಂಕಾ ಕಾಂಟ್ಯಾಕ್ಟ್ನಲ್ಲಿರೋ ವ್ಯಕ್ತಿಗಳಿಗೆ ಮೆಸೇಜ್ ಮಾಡುತ್ತಿದ್ದಾನೆ. ಇದರಿಂದ ಅನೇಕರಿಗೆ ಅನುಮಾನ ಬಂದಿದೆ. ಹೀಗಾಗಿ, ‘ಕರೆ ಮಾಡಿ, ನಾವು ಫೋನ್ನಲ್ಲೇ ಮಾತನಾಡೋಣ’ ಎಂದು ಉತ್ತರಿಸಿದ್ದಾರೆ. ಆದರೆ, ‘ಈಗ ಮಾತನಾಡೋಕೆ ಆಗಲ್ಲ’ ಎಂದು ಹ್ಯಾಕರ್ ಹೇಳಿದ್ದಾನೆ. ಹೀಗಾಗಿ, ಯಾರೂ ಹಣ ಕಳುಹಿಸಿಲ್ಲ ಎಂದು ಹೇಳಲಾಗುತ್ತಿದೆ.
