ಬೆಂಗಳೂರು
ವರನಟ ಡಾ. ರಾಜ್ಕುಮಾರ್ ಹಾಗೂ ಅವರ ಕುಟುಂಬದವರ ಬಗ್ಗೆ ಇತ್ತೀಚೆಗೆ ಅವಹೇಳನಕಾರಿ ಹೇಳಿಕೆ ನೀಡಿ ವಿಡಿಯೋ ಹರಿಬಿಟ್ಟಿದ್ದ ವಿನೋದ್ ಶೆಟ್ಟಿ ಎಂಬುವವರು ಇದೀಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ . ಜಾಲತಾಣದಲ್ಲಿ ಹೆಸರಾಗುತ್ತೆ ಅಂತಾ ವಿನೋದ್ ಶೆಟ್ಟಿ ನಾಲಗೆ ಹರಿಬಿಟ್ಟಿದ್ದರು ಎನ್ನಲಾಗಿದೆ.
ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ತೆರವು ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಕೂಡ ನಡೆದಿತ್ತು. ಇದೇ ವಿಚಾರವಾಗಿ ವಿನೋದ್ ಶೆಟ್ಟಿ, ವಿಡಿಯೋ ಒಂದನ್ನು ಮಾಡುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದರು. ಅವರ ವಿಡಿಯೋಗೆ ಅಣ್ಣಾವ್ರ ಅಭಿಮಾನಿಗಳು ಕೆಟ್ಟದಾಗಿ ಮಾತನಾಡಿದ್ದರು ಎನ್ನಲಾಗಿದೆ.
ಇದರಿಂದ ಕೆರಳಿದ ವಿನೋದ್ ಶೆಟ್ಟಿ, ಮತ್ತೊಂದು ವಿಡಿಯೋ ಹರಿಬಿಡುವ ಮೂಲಕ ರಾಜ್ಕುಮಾರ್ ಹಾಗೂ ಕುಟುಂಬದವರ ಬಗ್ಗೆ ಏಕವಚನದಲ್ಲಿ ಕೆಟ್ಟದಾಗಿ ನಿಂದಿಸಿದ್ದರು. ಅಷ್ಟೇ ಅಲ್ಲದೆ ಬಾಯಿಗೆ ಬಂದಂತೆ ಮಾತಾಡಿ ತಾಕತ್ತಿದ್ದರೆ, ಚರ್ಚೆಗೆ ಬನ್ನಿ ಎಂದು ತಮ್ಮ ಫೋನ್ ನಂಬರ್ ನೀಡಿದ್ದರು. ಡಾ. ರಾಜ್ಕುಮಾರ್ ಹಾಗೂ ಅವರ ಕುಟುಂಬದವರ ಬಗ್ಗೆ ನಿಂದಿಸಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಣ್ಣಾವ್ರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ವಿನೋದ್ ಶೆಟ್ಟಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು.
ಇನ್ನು ಕ್ಷಮೆ ಕೇಳಿರುವ ವಿನೋದ್ ಶೆಟ್ಟಿ, ರಾಜ್ ಕುಮಾರ್ ಅವರ ಬಗ್ಗೆ ನಾನು ಹಾಗೇ ಮಾತನಾಡಬಾರದಿತ್ತು. ಕರ್ನಾಟಕದ ಜನರಲ್ಲಿ ಕ್ಷಮೆ ಕೇಳುತ್ತೇನೆ. ರಾಜ್ ಅಭಿಮಾನಿಗಳು ವಿಷ್ಣು ಅಪ್ಪಾಜಿ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಆ ದ್ವೇಷದಿಂದ, ಸ್ಮಾರಕ ಒಡೆದು ಹಾಕಿದ್ದ ಬೇಸರದಲ್ಲಿ ನಾನು ಈ ರೀತಿ ಮಾತನಾಡಿ ವೀಡಿಯೋ ಮಾಡಿದ್ದೆ ಎಂದು ಹೇಳಿದ್ದರು. ಸದ್ಯ ಅವರು ಪೊಲೀಸರ ಅತಿಥಿ ಆಗಿದ್ದಾರೆ.
