ನವದೆಹಲಿ:
ಎಲ್ಗಾರ್ ಪರಿಷತ್– ಮಾವೋವಾದಿಗಳ ಜೊತೆಗಿನ ಸಂಪರ್ಕ ಪ್ರಕರಣದ ಆರೋಪಿ ಮಹೇಶ್ ರಾವತ್ಗೆ ವೈದ್ಯಕೀಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ನೀಡಿದೆ.ಬಾಂಬೆ ಹೈಕೋರ್ಟ್ ಜಾಮೀನು ನೀಡಿದ್ದರೂ, ತಮ್ಮ ಬಂಧನವನ್ನು ಪ್ರಶ್ನಿಸಿ ರಾವತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂಎಂ ಸುಂದರೇಶ್ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠವು ವಿಚಾರಣೆ ನಡೆಸಿತು.
ರಾವತ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿಯು ಸಿಂಗ್, ಆರೋಪಿಯು ರುಮಟಾಯ್ಡ್ ಆರ್ಥಿಟಿಸ್ನಿಂದ ಬಳಲುತ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದನ್ನು ಸುಪ್ರೀಂ ಕೋರ್ಟ್ ಗಮನಿಸಿತು.’ಅರ್ಜಿದಾರನು ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಕೋರುತ್ತಿದ್ದು, ಆತನಿಗೆ ಈಗಾಗಲೇ ಜಾಮೀನು ನೀಡಲಾಗಿದೆ (ಬಾಂಬೆ ಹೈಕೋರ್ಟ್ನಿಂದ). ನಾವು ಆರು ವಾರಗಳ ಅವಧಿಗೆ ವೈದ್ಯಕೀಯ ಜಾಮೀನು ನೀಡಲು ಒಲವು ತೋರುತ್ತೇವೆ’ ಎಂದು ಪೀಠ ಹೇಳಿದೆ.
ರಾವತ್ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ಅಂಗೀಕರಿಸಿತು. ಆದರೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೋರಿಕೆ ಮೇರೆಗೆ ತನ್ನ ಆದೇಶವನ್ನು ಒಂದು ವಾರ ತಡೆಹಿಡಿಯಿತು. ನಂತರ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಅವರ ಬಿಡುಗಡೆ ಮೇಲಿನ ತಡೆಯಾಜ್ಞೆಯನ್ನು ವಿಸ್ತರಿಸಿತು. ರಾವತ್ ಪರ ವಕೀಲರು ಈ ಹಿಂದೆ, ಮಹೇಶ್ ಅವರು ರುಮಟಾಯ್ಡ್ ಸಂಧಿವಾತದಿಂದ ಬಳಲುತ್ತಿದ್ದಾರೆ. ಹೀಗಾಗಿ, ಜೈಲಿನಲ್ಲಿ ಅಥವಾ ಅವರನ್ನು ಪರೀಕ್ಷಿಸಿರುವ ಜೆಜೆ ಆಸ್ಪತ್ರೆಯಲ್ಲಿ ವಿಶೇಷ ವೈದ್ಯಕೀಯ ಆರೈಕೆ ಲಭ್ಯವಿಲ್ಲ ಎಂದು ಹೇಳಿದ್ದರು.
ಈ ಪ್ರಕರಣವು 2017ರ ಡಿಸೆಂಬರ್ 31ರಂದು ಪುಣೆಯ ಶನಿವಾರವಾಡದಲ್ಲಿ ನಡೆದ ಎಲ್ಗಾರ್ ಪರಿಷದ್ ಸಮಾವೇಶದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳಿಗೆ ಸಂಬಂಧಿಸಿದೆ. ಇದು ಮರುದಿನ ನಗರದ ಹೊರವಲಯದಲ್ಲಿರುವ ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರವನ್ನು ಪ್ರಚೋದಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವು ಗಾಯಗೊಂಡಿದ್ದಾರೆ. ಹನ್ನೆರಡಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಶಿಕ್ಷಣತಜ್ಞರನ್ನು ಆರೋಪಿಗಳೆಂದು ಹೆಸರಿಸಲಾಗಿರುವ ಈ ಪ್ರಕರಣವನ್ನು ಪುಣೆ ಪೊಲೀಸರು ತನಿಖೆ ನಡೆಸಿದ್ದರು. ಈ ಸಮಾವೇಶಕ್ಕೆ ಮಾವೋವಾದಿಗಳ ಬೆಂಬಲವಿದೆ ಎಂದು ಪುಣೆ ಪೊಲೀಸರು ಹೇಳಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವರ್ಗಾಯಿಸಲಾಗಿದೆ.
ಎಲ್ಗಾರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ 2020 ರಲ್ಲಿ ಬಂಧಿಸಲ್ಪಟ್ಟ ಮತ್ತೊಬ್ಬ ಕಾರ್ಯಕರ್ತೆ ಜ್ಯೋತಿ ಜಗ್ತಾಪ್ ಅವರ ಜಾಮೀನು ಅರ್ಜಿಯನ್ನು ಸಹ ನ್ಯಾಯಪೀಠ ವಿಚಾರಣೆ ನಡೆಸುವ ಸಾಧ್ಯತೆಯಿದೆ.
