ಅನರ್ಹ ಬಿಪಿಎಲ್ ಕಾರ್ಡ್​ದಾರರಿಗೆ ಶಾಕ್ ನೀಡಲಿದೆ ಆಹಾರ ಇಲಾಖೆ

ಬೆಂಗಳೂರು

    ಬಡ ಹಾಗೂ ಮಧ್ಯಮ ವರ್ಗದ ಜನರು, ಉಣ್ಣಲು ಗತಿ ಇಲ್ಲದವರಿಗಿಂತ ಹೆಚ್ಚಾಗಿ ಬಿಪಿಎಲ್ ಕಾರ್ಡ್​ಗಳು  ಅನರ್ಹರ ಕೈಸೇರಿರುವುದು ಗೊತ್ತಾಗಿದ್ದು, ಮೇಜರ್ ಸರ್ಜರಿಗೆ ಆಹಾರ ಇಲಾಖೆ ಮುಂದಾಗಿದೆ. ಹತ್ತಾರು ಎಕರೆ ಜಮೀನು, ಓಡಾಡಲು ಐಷಾರಾಮಿ ಕಾರು, ವಾಸ ಮಾಡಲು ಬಂಗಲೆ ಇರುವವರೂ ಪಡಿತರ ಚೀಟಿ ಪಡೆದು ರೇಷನ್ ಪಡೆಯುತ್ತಿದ್ದಾರೆ. ಅದೆಷ್ಟೋ ಜನ ಅದನ್ನು ತಿನ್ನುವುದೂ ಇಲ್ಲ. ಬದಲಿಗೆ ಸಿಕ್ಕ ದರಕ್ಕೆ ಮಾರಾಟ ಮಾಡುತ್ತಾರೆ. ಆದರೆ ನಿಜವಾಗಿಯೂ ಪಡಿತರ ಚೀಟಿ ಯಾರಿಗೆ ಸಿಗಬೇಕೋ ಅವರಿಗೆ ಸಿಗುತ್ತಿಲ್ಲ. ಹೀಗಾಗಿ ಅನರ್ಹರಿಗೆ ನೀಡಿರುವ ಬಿಪಿಎಲ್ ಕಾರ್ಡ್​ಗಳನ್ನ ರದ್ದು ಮಾಡಬೇಕು ಎನ್ನುವ ಕೂಗು ಆಗಾಗ್ಗೆ ಕೇಳಿ ಬರುತ್ತಿತ್ತು. ಇದೀಗ ಕೊನೆಗೂ ಎಚ್ಚೆತ್ತಿರುಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ  ಮೇಜರ್ ಸರ್ಜರಿಗೆ ಮುಂದಾಗಿದೆ.

   ಈ ಬಗ್ಗೆ ಸಚಿವ ಕೆಎಚ್​ ಮುನಿಯಪ್ಪ ಪ್ರತಿಕ್ರಿಯಿಸಿದ್ದು, ಅನರ್ಹರ ಕಾರ್ಡ್​ಗಳನ್ನು ರದ್ದು ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗುವುದು ಎಂದಿದ್ದಾರೆ.ರಾಜ್ಯದಲ್ಲಿ ವಿತರಣೆ ಮಾಡಲಾಗಿರುವ 1.50 ಕೋಟಿಗೂ ಹೆಚ್ಚಿನ ಕಾರ್ಡ್​​ಗಳಲ್ಲಿ ಸುಮಾರು 12 ಲಕ್ಷ ಅನರ್ಹ, ಅನುಮಾನಾಸ್ಪದ ಎಂದು ಪಟ್ಟಿ ಮಾಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸುಳ್ಳು ಮಾಹಿತಿ ನೀಡಿರುವುದು ಕಂಡುಬಂದಿದೆ.

   2017ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಮಾನದಂಡಗಳ ಪ್ರಕಾರ, ಬಿಪಿಎಲ್​ ಕಾರ್ಡ್​ ಪಡೆಯಲು ಹಲವು ನಿಬಂಧನೆಗಳನ್ನು ಹೇರಲಾಗಿದೆ. ಸರ್ಕಾರಿ ನೌಕರಿಯಲ್ಲಿರಬಾರದು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಭೂಮಿ, ನಗರ ಪ್ರದೇಶದಲ್ಲಿ 1 ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ಭೂಮಿ ಹೊಂದಿರಬಾರದು, ನಾಲ್ಕು ಚಕ್ರದ ವಾಹನ ಇರಬಾರದು, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಮೀರಬಾರದು ಎಂಬಿತ್ಯಾದಿ ಮಾನದಂಡ ಹೇರಲಾಗಿದೆ. ಆದರೂ, ಅವ್ಯಾವುವೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. 

   ನೀತಿ ಆಯೋಗದ ವರದಿ ಪ್ರಕಾರ 2021ನೇ ಸಾಲಿನಂತೆ ರಾಜ್ಯದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳು ಶೇ 7.58 ಮಾತ್ರ. ಆದರೆ ವಿತರಣೆಯಾದ ಬಿಪಿಎಲ್​​ ಕಾರ್ಡ್​ಗಳು ಇದಕ್ಕೆ ಹೊಂದಾಣಿಕೆಯಾಗುತ್ತಿಲ್ಲ. ಹೀಗಾಗಿ ಹೊಸದಾಗಿ ಬಿಪಿಎಲ್​ ಕಾರ್ಡ್​ಗೆ ಅರ್ಜಿ ಸಲ್ಲಿಸಿರುವ ಮಂದಿಗೂ ಕಾರ್ಡ್​ ಸಿಗದೆ ಪರದಾಟ ನಡೆಸುತ್ತಿದ್ದಾರೆ. ಹೀಗಾಗಿ ಅನುಮಾನಸ್ಪದ 12 ಲಕ್ಷ ಕಾರ್ಡ್​​ಗಳಲ್ಲಿ 8 ಲಕ್ಷಕ್ಕೂ ಹೆಚ್ಚಿನ ಕಾರ್ಡ್​ಗಳು ಡಿಲೀಟ್​ ಆಗುವುದು ಬಹುತೇಕ ನಿಶ್ಚಿತ.

Recent Articles

spot_img

Related Stories

Share via
Copy link