ಧರ್ಮಸ್ಥಳ ಕೇಸ್:‌ ಬುರುಡೆ ಚಿನ್ನಯ್ಯನ ಜಾಮೀನು ಅರ್ಜಿ ವಜಾ

ಮಂಗಳೂರು:

   ಧರ್ಮಸ್ಥಳದ ಪ್ರಕರಣದಲ್ಲಿ  ಜೈಲು ಪಾಲಾಗಿರುವ ಮಾಸ್ಕ್‌ ಮ್ಯಾನ್ ಚಿನ್ನಯ್ಯನ  ಜಾಮೀನು ಅರ್ಜಿಯನ್ನು ಬೆಳ್ತಂಗಡಿ ಕೋರ್ಟ್ ವಜಾ ಮಾಡಿದೆ. ಚಿನ್ನಯ್ಯ ಜೈಲು ಸೇರಿದ ಮೇಲೆ ಅವರ ಪರವಾಗಿ ಜಿಲ್ಲಾ ಕಾನೂನು ಪ್ರಾಧಿಕಾರದ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಡೆ ಜಾಮೀನು ನೀಡದಂತೆ ಎಸ್​ಐಟಿ  ಪರ ವಕೀಲ ದಿವ್ಯರಾಜ್ ಹೆಗ್ಡೆ ಪುತ್ತೂರು ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು. ಎರಡು ಕಡೆಯಿಂದ ವಾದ-ಪ್ರತಿವಾದ ಆಲಿಸಿದ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಅವರು ಚಿನ್ನಯ್ಯನ ಜಾಮೀನು ಅರ್ಜಿ ವಜಾ ಮಾಡಿ ಸೆಪ್ಟೆಂಬರ್ 16ರಂದು ಆದೇಶ ಹೊರಡಿಸಿದ್ದಾರೆ.

   ಇದರಿಂದ ಆರೋಪಿ ಚಿನ್ನಯ್ಯ ಜೈಲಿನಲ್ಲಿಯೇ ದಿನ ಕಳೆಯಬೇಕಾಗಿದೆ. ಚಿನ್ನಯ್ಯ ತೋರಿಸಿದ್ದ ಜಾಗಗಳಲ್ಲಿ ಅಗೆದು ನೋಡಿದರೂ ಸಹ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಕೊನೆಗೆ ಎಸ್​ಐಟಿ ಅಧಿಕಾರಿಗಳೇ ಚಿನ್ನಯ್ಯನನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದು, ಈ ವೇಳೆ ಕೆಲವು ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಸದ್ಯ ಚಿನ್ನಯ್ಯಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಭದ್ರತಾ ಕಾರಣಗಳಿಂದಾಗಿ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.

   ಹೆಚ್ಚು ಕಡಿಮೆ ಎರಡು ತಿಂಗಳು ಬುರುಡೆ ನೆಪದಲ್ಲಿ ಚಿನ್ನಯ್ಯ ಧರ್ಮಸ್ಥಳ ಸುತ್ತ ಮುತ್ತ 17 ಗುಂಡಿ ಅಗೆಸಿದ್ದ. ಕೊನೆಗೆ ನಾನು ಹೇಳಿದ್ದೆಲ್ಲ ಸುಳ್ಳು ಅಂತ ತಪ್ಪೊಪ್ಪಿಕೊಂಡಿದ್ದ. ಕಳೆದ 15 ದಿನದಿಂದ ತೀವ್ರ ವಿಚಾರಣೆ ನಡೆಸಿ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿರುವ ಎಸ್‌ಐಟಿ ಅಧಿಕಾರಿಗಳು, ಬುರುಡೆ ಬಿಟ್ಟವನನ್ನು ಜೈಲಿಗಟ್ಟಿದ್ದರು.

   ಚಿನ್ನಯ್ಯನ ಹೇಳಿಕೆಗಳ ಆಧಾರದಲ್ಲಿ ಗಿರೀಶ್ ಮಟ್ಟೆಣ್ಣವರ್, ಜಯಂತ್ ಬಿ., ಯೂಟ್ಯೂಬರ್ ಗಳಾದ ಸಮೀರ್ ಎಂ.ಡಿ. ಅಭಿಷೇಕ್ ವಿಚಾರಣೆ ನಡೆಸಲಾಗಿದೆ. ಸೌಜನ್ಯಾ ನಾಪತ್ತೆ ಮತ್ತು ಶಂಕಾಸ್ಪದ ಸಾವು ವಿಚಾರದಲ್ಲಿ ಚಿನ್ನಯ್ಯನ ತನಿಖೆ ನಡೆಸುವಂತೆ ಸೌಜನ್ಯಾ ತಾಯಿ ಕುಸುಮಾವತಿ ದೂರು ನೀಡಿದ್ದರು. ಎಸ್‌ಐಟಿ ರಚನೆ ಆಗುವ ಮೊದಲೇ ದೂರುದಾರ ಚಿನ್ನಯ್ಯ ಮತ್ತು ತಂಡ ಕೇರಳದ ಸಂಸದರೊಬ್ಬರನ್ನು ಭೇಟಿ ಮಾಡಿ, ಸಮಾಲೋಚನೆ ಮಾಡಿತ್ತು ಎಂದು ಹೇಳಲಾಗುತ್ತಿದೆ. ಈ ವಿಷಯದ ಸತ್ಯಾಸತ್ಯತೆ ಬಗ್ಗೆ ಎಸ್ ಐಟಿ ತನಿಖೆ ನಡೆಸುತ್ತಿದೆ.

Recent Articles

spot_img

Related Stories

Share via
Copy link