ಚಡಚಣ : ಎಸ್‌ಬಿಐ ಬ್ಯಾಂಕ್‌ನಲ್ಲಿ 21 ಕೋಟಿ ಮೌಲ್ಯದ ನಗದು

ವಿಜಯಪುರ:

    ಚಡಚಣ ಎಸ್‌ಬಿಐ ಶಾಖೆಯಲ್ಲಿ1 ಕೋಟಿ ರೂ. ನಗದು, 20 ಕೆಜಿ ಚಿನ್ನಾಭರಣ ಸೇರಿ ಒಟ್ಟು 21 ಕೋಟಿ ಮೌಲ್ಯದ ವಸ್ತುಗಳು ದರೋಡೆಯಾಗಿದೆ . ದರೋಡೆಕೋರರ ಬಂಧನಕ್ಕೆ 8 ತನಿಖಾ ತಂಡ ರಚಿಸಲಾಗಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

    ಬ್ಯಾಂಕ್‌ ದರೋಡೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಬ್ಯಾಂಕ್ ದರೋಡೆಗೆ 5 ಜನರು ಬಂದಿದ್ದರು. 6 ಜನ ಬ್ಯಾಂಕ್ ಸಿಬ್ಬಂದಿ ಹಾಗೂ 4 ಜನ ಗ್ರಾಹಕರನ್ನು ದರೋಡೆಕೋರರು ಲಾಕ್ ಮಾಡಿದ್ದಾರೆ. ಕೋಣೆಯಲ್ಲಿ ಕೂಡಿ ಹಾಕಿ, ಪ್ಲಾಸ್ಟಿಕ್ ಬ್ಯಾಂಡ್‌ಗಳಿಂದ ಕೈ, ಕಾಲು ಕಟ್ಟಿ ದರೋಡೆ ಮಾಡಿ ಪರಾರಿಯಾಗಿದ್ದಾರೆ. ಅವರು ಪಂಡರಾಪುರ ಕಡೆ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಸದ್ಯದ ಮಾಹಿತಿ ಪ್ರಕಾರ 1 ಕೋಟಿ ರೂ. ನಗದು, ಅಂದಾಜು 20 ಕೆಜಿ ಚಿನ್ನಾಭರಣ ಸೇರಿದಂತೆ 21 ಕೋಟಿ ರೂ. ಮೌಲ್ಯದ ವಸ್ತುಗಳು ದರೋಡೆಯಾಗಿದೆ ಎಂದು ತಿಳಿಸಿದ್ದಾರೆ.

   ಮಂಗಳವಾರ (ಸೆ.17) ಸಂಜೆ 6:30 ರಿಂದ 7:30ರ ನಡುವೆ ಬ್ಯಾಂಕ್ ಕ್ಲೋಸಿಂಗ್ ಟೈಂನಲ್ಲಿ ದರೋಡೆ ನಡೆದಿದೆ. ದರೋಡೆಕೋರರ ಪೈಕಿ ಒಬ್ಬ ವ್ಯಕ್ತಿ ಮೊದಲೇ ಒಳಗೆ ಬಂದು ಕುಳಿತಿದ್ದ. ಬ್ಯಾಂಕ್ ಕ್ಲೋಸಿಂಗ್ ಟೈಂನಲ್ಲಿ ಲಾಕರ್ ಓಪನ್ ಇತ್ತು. ಆಗ ಬಂದೂಕಿನಿಂದ ಬೆದರಿಸಿ, ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ. ಒಟ್ಟು 398 ಪ್ಯಾಕ್ ಚಿನ್ನ ಅಂದರೆ 21 ಕೋಟಿ ರೂ. ಮೌಲ್ಯದ ಚಿನ್ನ, ನಗದು ದರೋಡೆಯಾಗಿದೆ ಎಂದಿದ್ದಾರೆ. 

   ಸದ್ಯ 8 ತನಿಖಾ ತಂಡಗಳ ನೇಮಕ ಮಾಡಿ, ದರೋಡೆಕೋರರ ಬಂಧನಕ್ಕೆ ಬಲೆ ಬೀಸಲಾಗಿದೆ. ಈಗಾಗಲೇ ಹುಲಜಂತಿಯಲ್ಲಿ ದರೋಡೆಗೆ ಬಳಸಿದ ವಾಹನ ಪತ್ತೆಯಾಗಿದ್ದು, ಸ್ವಲ್ಪ ದುಡ್ಡು, ಬಂಗಾರದ ಪ್ಯಾಕೆಟ್ ಸಿಕ್ಕಿದೆ. ಆದರೆ ವಾಹನ ನಕಲಿ ನಾಮಫಲಕ ಹೊಂದಿದೆ. ಆದಷ್ಟು ಬೇಗ ದರೋಡೆಕೋರರನ್ನ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link