ಜಂಟಿ ಸಮೀಕ್ಷೆ ಮುಗಿಯುತ್ತಿದ್ದಂತೆ ಸಮರ್ಪಕವಾಗಿ ಪರಿಹಾರ ತಲುಪಿಸಿ: ಸಿಎಂ ಸಿದ್ದರಾಮಯ್ಯ

ಕಲಬುರಗಿ: 

    ಜಂಟಿ ಸಮೀಕ್ಷೆ ಮುಗಿಯುತ್ತಿದ್ದಂತೆ ಬೆಳೆ ಹಾನಿಗೆ ಸಮರ್ಪಕವಾಗಿ ಪರಿಹಾರ ತಲುಪಿಸಿ. ಮಾನವ- ಜಾನವಾರು ಜೀವ ಹಾನಿಗಳಿಗೆ ಶೇ.100ರಷ್ಟು ಪರಿಹಾರ ಒದಗಿಸಿರುವ ರೀತಿಯಲ್ಲೇ ಬೆಳೆ ಹಾನಿಗೂ ಒದಗಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಲಬುರಗಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿ ಅತಿವೃಷ್ಠಿಯಿಂದ ಸಂಭವಿಸಿದ ಬೆಳೆ ಹಾನಿ ಕುರಿತಂತೆ ಮಾಹಿತಿ ಪಡೆದು, ಜಂಟಿ ಸಮೀಕ್ಷೆ ನಡೆದಿರುವ ಪ್ರಮಾಣದ ಬಗ್ಗೆ ಮಾಹಿತಿ ಪಡೆದ ಬಳಿಕ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಲಹೆ ಸೂಚನೆಗಳನ್ನು ನೀಡಿದರು.

   ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್ ಸಿಂಗ್, ಪರಿಸ್ಥಿತಿಯನ್ನು ವಿವರಿಸಿ, “ತಾವು ಸಿಎಂ ಆಗಿರುವಾಗ ಕಳೆದ ಬಾರಿಗಿಂತ ಈ ಬಾರಿ ಉತ್ತಮ ಮಳೆ ಆಗಿದೆ. ವಾಡಿಕೆಗಿಂತ ಶೇ.17ರಷ್ಟು ಮಳೆ ಹೆಚ್ಚಾಗಿದೆ. 37 ಮಾನವ ಜೀವ ಹಾನಿ ಪ್ರಕರಣಗಳು ವರದಿಯಾಗಿದ್ದು ಎಲ್ಲಾ ಪರಿಹಾರ ನೀಡಲಾಗಿದೆ. ಜಾನವಾರು ಪ್ರಾಣ ಹಾನಿ 175 ಪ್ರಕರಣ ವರದಿಯಾಗಿದ್ದು, ಎಲ್ಲದಕ್ಕೂ ಪರಿಹಾರ ನೀಡಲಾಗಿದೆ. ಸಂಪೂರ್ಣ ಮನೆ ಹಾನಿ, ಭಾಗಶಃ ಹಾನಿ ಆಗಿರುವ ಎಲ್ಲಾ ಪ್ರಕರಣಗಳಲ್ಲೂ ಪರಿಹಾರ ನೀಡಲಾಗಿದೆ ಎಂದರು.

   ಬೀದರ್, ಕಲಬುರಗಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಿಂದ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.‌ ನಿರಂತರ ಜೋರು ಮಳೆ ಇರುವುದರಿಂದ ಬೆಳೆ ಹಾನಿಯ ಸಂಪೂರ್ಣ ಜಂಟಿ ಸಮೀಕ್ಷೆಗೆ ಅಡ್ಡಿ ಆಗುತ್ತಿದೆ. ಹೀಗಾಗಿ ನಿಗದಿತ ಅವಧಿಯೊಳಗೆ ಜಂಟಿ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಮಳೆ ನಿಂತ ಬಳಿಕ ಎಂಟತ್ತು ದಿನಗಳ ಹೆಚ್ಚುವರಿ ಅಗತ್ಯ ಬೀಳಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳಿಗೆ ವಿವರಿಸಿದರು. ಸದ್ಯ ಡ್ರೋಣ್ ಕ್ಯಾಮರಾ ಮೂಲಕ ಮಾಡಿರುವ ಬೆಳೆ ಹಾನಿ ವಿಡಿಯೊವನ್ನು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ತೋರಿಸಿ ವಿವರಿಸಿದರು.

Recent Articles

spot_img

Related Stories

Share via
Copy link