ಚೆನ್ನೈ
ತಮಿಳು ನಟ ರೋಬೋ ಶಂಕರ್ ಅವರು 46ನೇ ವಯಸ್ಸಿಗೆ ನಿಧನ ಹೊಂದಿದ್ದಾರೆ. ಅವರು ಈಗಾಗಲೇ ಧನುಶ್ ಹಾಗೂ ದಳಪತಿ ವಿಜಯ್ ಮೊದಲಾದ ಸ್ಟಾರ್ ಹೀರೋಗಳ ಜೊತೆ ಅವರು ನಟಿಸಿದ್ದಾರೆ. ಅವರ ಸಾವು ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ. ಅವರ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ.
ರೋಬೋ ಶಂಕರ್ ಅವರಿಗೆ ಇತ್ತೀಚೆಗೆ ಆರೋಗ್ಯ ಕೈ ಕೊಟ್ಟಿತ್ತು. ಅವರು ಜಾಂಡೀಸ್ನಿಂದ ಬಳಲುತ್ತಿದ್ದರು. ವರ್ಷಗಳ ಹಿಂದೆಯೇ ಈ ರೋಗ ಕಾಣಿಸಿಕೊಂಡಿತ್ತು. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಇದಕ್ಕಾಗಿ ಅವರು ಸಾಕಷ್ಟು ಸಿನಿಮಾಗಳನ್ನು ಕೂಡ ಬಿಟ್ಟಿದ್ದರು. ಜಾಂಡೀಸ್ನಿಂದ ಅವರು ಸಾಕಷ್ಟು ತೆಳ್ಳಗಾಗಿದ್ದರು. ಇತ್ತೀಚೆಗೆ ಅವರು ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದರು.
ರೋಬೋ ಶಂಕರ್ ಅವರು ಸೆಪ್ಟೆಂಬರ್ 16ರಂದು ಶೂಟಿಂಗ್ ಸೆಟ್ನಲ್ಲೇ ಮೂರ್ಚೆ ಹೋದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅವರಿಗೆ ಕರುಳಿನಲ್ಲಿ ರಕ್ತಸ್ರಾವ ಆಗಿತ್ತು ಎನ್ನಲಾಗಿದೆ. ಸತತ ಚಿಕಿತ್ಸೆಗಳ ಬಳಿಕವೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ವೈದ್ಯರು ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅವರ ಸಾವಿಗೆ ನಟ ಕಮಲ್ ಹಾಸನ್, ರಾಧಿಕಾ ಶರತ್ಕುಮಾರ್, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ರೋಬೋ ಶಂಕರ್ ಅವರು ಧನುಶ್ ಜೊತೆ ‘ಮಾರಿ’, ವಿಶಾಲ್ ಜೊತೆ ‘ಇರುಂಬು ದಿರಾಯಿ’, ‘ವಿಶ್ವಾಸಂ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದರು. ಅವರು ಕೆಲವು ರಿಯಾಲಿಟಿ ಶೋಗಳಲ್ಲೂ ನಟಿಸಿದ್ದರು. ಈಗ ಅವರು ಇಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳುವುದೇ ಕಷ್ಟವಾಗಿದೆ. ರೋಬೋ ಶಂಕರ್ ಅವರು ಪತ್ನಿ ಪ್ರಿಯಾಂಕಾ ಹಾಗೂ ಮಗಳು ಇಂದ್ರಜಾ ಅವರನ್ನು ಅಗಲಿದ್ದಾರೆ.
