ನವದೆಹಲಿ:
ದೆಹಲಿಯ ಐಷಾರಾಮಿ ವಸಂತ್ ಕುಂಜ್ ಪ್ರದೇಶದಲ್ಲಿರುವ ಪ್ರಸಿದ್ಧ ಆಶ್ರಮದ ಸ್ವಾಮೀಜಿ ವಿರುದ್ಧ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ನ ಸ್ವಾಮಿ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥ್ ಸಾರಥಿ, ಆರ್ಥಿಕವಾಗಿ ದುರ್ಬಲ ವರ್ಗಗಳ (ಇಡಬ್ಲ್ಯೂಎಸ್) ವಿಭಾಗದಲ್ಲಿ ವಿದ್ಯಾರ್ಥಿವೇತನದೊಂದಿಗೆ ಸ್ನಾತಕೋತ್ತರ ನಿರ್ವಹಣಾ ಡಿಪ್ಲೊಮಾ ಕೋರ್ಸ್ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ್ದಕ್ಕಾಗಿ ಪ್ರಕರಣ ದಾಖಲು ಮಾಡಲಾಗಿದೆ.
ಸ್ವಾಮಿ ಚೈತನ್ಯಾನಂದ ಅಶ್ಲೀಲ ಭಾಷೆ ಬಳಸಿ, ಅಶ್ಲೀಲ ಪಠ್ಯ ಸಂದೇಶಗಳನ್ನು ಕಳುಹಿಸಿದ್ದ. ಅಷ್ಟೇ ಅಲ್ಲದೇ ವಿದ್ಯಾರ್ಥಿನಿಯರ ಮೇಲೆ ಬಲವಂತಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಮಹಿಳಾ ಅಧ್ಯಾಪಕರು ಮತ್ತು ಆಡಳಿತ ಸಿಬ್ಬಂದಿ ಕೂಡ ಆರೋಪಿಗಳ ಬೇಡಿಕೆಗಳನ್ನು ಪಾಲಿಸುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಹೇಳಿಕೆಗಳ ಆಧಾರದ ಮೇಲೆ, ಪೊಲೀಸರು ಸ್ವಾಮಿ ಚೈತನ್ಯಾನಂದರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಇತರ ಆರೋಪಗಳಿಗಾಗಿ ಪ್ರಕರಣ ದಾಖಲಿಸಿದ್ದಾರೆ ಎಂದು ನೈಋತ್ಯ ಜಿಲ್ಲೆಯ ಉಪ ಪೊಲೀಸ್ ಆಯುಕ್ತ ಅಮಿತ್ ಗೋಯಲ್ ತಿಳಿಸಿದ್ದಾರೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಅಪರಾಧ ನಡೆದ ಸ್ಥಳ ಹಾಗೂ ಆರೋಪಿಯ ವಿಳಾಸದ ಮೇಲೆ ದಾಳಿ ನಡೆಸಿದ್ದಾರೆ. ಆದಾಗ್ಯೂ, ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಮೂಲಗಳು ಸೂಚಿಸುವಂತೆ ಅವನು ಕೊನೆಯ ಬಾರಿಗೆ ಆಗ್ರಾ ಬಳಿ ಪತ್ತೆಯಾಗಿದ್ದ. ಸದ್ಯ ಆತನಿಗಾಗಿ ಹುಡುಕಾಟ ನಡೆಯುತ್ತಿದೆ.
ತನಿಖೆಯ ಸಮಯದಲ್ಲಿ, ಪೊಲೀಸರು ಸಂಸ್ಥೆಯ ನೆಲಮಾಳಿಗೆಯಲ್ಲಿ ಸ್ವಾಮಿ ಚೈತನ್ಯಾನಂದ ಬಳಸುತ್ತಿದ್ದ ವೋಲ್ವೋ ಕಾರನ್ನು ವಶಕ್ಕೆ ಪಡೆದಿದ್ದಾರೆ. ಪರಿಶೀಲನೆಯ ನಂತರ, ಕಾರು ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್ (39 UN 1) ಅನ್ನು ಬಳಸಿರುವುದು ಕಂಡುಬಂದಿದೆ. ಸದ್ಯ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆಡಳಿತ ಮಂಡಳಿ ಸ್ವಾಮಿಯನ್ನು ವಜಾಗೊಳಿಸಿದೆ. ದೆಹಲಿ ಘಟಕವು ಎರಡು ಬ್ಯಾಚ್ಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು, ಪ್ರತಿ ಬ್ಯಾಚ್ನಲ್ಲಿ 35 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು.








