ರಿಲೀಸ್‌ ಬೆನ್ನಲ್ಲೇ ಭಾರತಕ್ಕೆ ಬೆದರಿಕೆ ಹಾಕಿದ ಖಲಿಸ್ತಾನ ಉಗ್ರ….!

ಕೆನಡಾ:

   ಮೋಸ್ಟ್‌ ವಾಂಟೆಡ್‌ ಖಲಿಸ್ತಾನಿ ಉಗ್ರ ಕೆನಡಾದಲ್ಲಿ ಬಂಧನಕ್ಕೊಳಗಾದ ಒಂದೇ ವಾರಕ್ಕೆ ಜಾಮೀನಿನ ಮೇಲೆ ಹೊರಬಂದಿದ್ದಾನೆ. ಖಲಿಸ್ತಾನಿ ಭಯೋತ್ಪಾದಕ ಇಂದರ್ಜೀತ್ ಸಿಂಗ್ ಗೋಸಲ್ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ವಿಡಿಯೊ ಸಂದೇಶವೊಂದನ್ನು ಭಾರತಕ್ಕೆ ರವಾನಿಸಿದ್ದಾನೆ. ಭಾರತ ನೋಡು ನಾನು ಜಾಮೀನು ಪಡೆದು ಹೊರಬಂದಿದ್ದೇನೆ. ಗುರುಪತ್ವಂತ್ ಸಿಂಗ್ ಪನ್ನುನ್ ಅವರನ್ನು ಬೆಂಬಲಿಸಲು ಮತ್ತು ನವೆಂಬರ್ 23, 2025 ರಂದು ಖಲಿಸ್ತಾನ ಜನಾಭಿಪ್ರಾಯ ಸಂಗ್ರಹಣೆಯನ್ನು ಆಯೋಜಿಸಲು ಹೊರಟಿದ್ದೇನೆ. ದೆಹಲಿ ಬನೇಗಾ ಖಲಿಸ್ತಾನ್  ಎಂದು ವಿಡಿಯೊದಲ್ಲಿ ಗೋಸಲ್‌ ಹೇಳಿದ್ದಾನೆ.

   ಒಂಟಾರಿಯೊದ ಸೆಂಟ್ರಲ್ ಈಸ್ಟ್ ಕರೆಕ್ಷನಲ್ ಸೆಂಟರ್‌ ಜೈಲಿನಿಂದ ಹೊರಬಂದ ಕೂಡಲೇ, ನಿಷೇಧಿತ ಗುಂಪು ಸಿಖ್ಸ್ ಫಾರ್ ಜಸ್ಟೀಸ್ (SFJ) ಗುರುಪತ್ವಂತ್ ಸಿಂಗ್ ಪನ್ನುನ್ ಜೊತೆಗೆ ಕಾಣಿಸಿಕೊಂಡ ಗೋಸಲ್‌ ಮತ್ತೆ ಉದ್ಧಟತನ ಮೆರೆದಿದ್ದಾನೆ. ಇನ್ನು ಇದರ ಬೆನ್ನಲ್ಲೇ ಪನ್ನುನ್ ಕೂಡ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಉಲ್ಲೇಖಿಸಿ ವಿಡಿಯೊವೊಂದನ್ನು ರಿಲೀಸ್‌ ಮಾಡಿದ್ದಾನೆ. ಅಜಿತ್‌ ದೋವಲ್‌ ಅವರೇ… ನೀವು ಕೆನಡಾ, ಅಮೆರಿಕ ಅಥವಾ ಯಾವುದೇ ಯುರೋಪಿಯನ್ ದೇಶಕ್ಕೆ ಬಂದು ನನ್ನನ್ನು ಬಂಧಿಸಲು ಅಥವಾ ಗಡೀಪಾರು ಮಾಡಲು ಏಕೆ ಪ್ರಯತ್ನಿಸಬಾರದು? ದೋವಲ್, ನಾನು ನಿಮಗಾಗಿ ಕಾಯುತ್ತಿದ್ದೇನೆ ಎಂದು ವ್ಯಂಗ್ಯವಾಡಿದ್ದಾನೆ.

   2023 ರಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಪನ್ನುನ್ ಅವರ ಪ್ರಮುಖ ಸಹಾಯಕ ಮತ್ತು SFJ ಯ ಕೆನಡಾ ಸಂಘಟಕ ಎಂದು ಪರಿಗಣಿಸಲಾದ ಗೋಸಲ್‌ನನ್ನು ಸೆಪ್ಟೆಂಬರ್ 19 ರಂದು ಒಂಟಾರಿಯೊದ ಸಂಚಾರ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ನ್ಯೂಯಾರ್ಕ್‌ನ ಜಗದೀಪ್ ಸಿಂಗ್ ಮತ್ತು ಟೊರೊಂಟೊದ ಅರ್ಮಾನ್ ಸಿಂಗ್ ಎಂಬ ಇಬ್ಬರು ಆರೋಪಿಗಳನ್ನು ಆತನನ್ನು ಬಂಧಿಸಲಾಯಿತು. ಗುಪ್ತಚರ ಮೂಲಗಳ ಪ್ರಕಾರ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ನೇತೃತ್ವದಲ್ಲಿ ನವದೆಹಲಿಯಿಂದ ನಿರಂತರ ರಾಜತಾಂತ್ರಿಕ ಮತ್ತು ಗುಪ್ತಚರ ಇಲಾಖೆ ಒತ್ತಡದ ಬಳಿಕ ಈ ಬಂಧನವಾಗಿತ್ತು.

   ಭಾರತೀಯ ಏಜೆನ್ಸಿಗಳು ಸಲ್ಲಿಸಿರುವ ಹಣಕಾಸಿನ ವಹಿವಾಟಿನ ದಾಖಲೆಗಳ ಬಳಿಕ ಕೆನಡಾದ ಅಧಿಕಾರಿಗಳು ಖಲಿಸ್ತಾನಿ ಉಗ್ರಗಾಮಿ ಸ್ಲೀಪರ್ ಸೆಲ್‌ಗಳನ್ನು ನಿಗ್ರಹಿಸಲು ಕ್ರಮಕ್ಕೆ ಮುಂದಾಗಿದ್ದಾರೆ. ಈ ಮೂವರು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಆರೋಪ ಎದುರಿಸುತ್ತಿದ್ದಾರೆ. ಸೋಮವಾರ ಅವರನ್ನು ಓಶಾವಾದ ಒಂಟಾರಿಯೊ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು ಆರೋಪಗಳು ಸಾಬೀತಾದರೆ ಜೈಲು ಶಿಕ್ಷೆ ವಿಧಿಸಬಹುದು ಎಂದು ಪೊಲೀಸರು ಸೂಚಿಸಿದ್ದರು. ಗಂಭೀರ ಆರೋಪಗಳ ಹೊರತಾಗಿಯೂ ಗೋಸಲ್‌ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾನೆ.

Recent Articles

spot_img

Related Stories

Share via
Copy link